ಮಾನ್ವಿ: ಮಾನ್ವಿ ಪಟ್ಟಣದ ಮೌನಮಿತ್ರ ಯೋಗ ಸಮಿತಿಗೆ ಈಗ ದಶಕದ ಸಂಭ್ರಮ.
ಪಟ್ಟಣದ ಸರ್ಕಾರಿ ಹಣ್ಣಿನ ತೋಟದಲ್ಲಿ ಕೋನಾಪುರಪೇಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೌನೇಶ ಪೋತ್ನಾಳ ನೇತೃತ್ವದಲ್ಲಿ ಪ್ರತಿ ದಿನ ಬೆಳಿಗ್ಗೆ ಉಚಿತವಾಗಿ ನಡೆಯುವ ಈ ಯೋಗಾಭ್ಯಾಸ ಕಾರ್ಯಕ್ರಮ ಸ್ಥಳೀಯರ ಮೆಚ್ಚುಗೆ ಗಳಿಸಿದೆ.
ಹಣ್ಣಿನ ತೋಟದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಮರ–ಗಿಡ, ಬಳ್ಳಿಗಳ ಮಧ್ಯದ ಜಾಗ ಪ್ರತಿಯೊಬ್ಬರಿಗೂ ನೆಮ್ಮದಿ ಮೂಡಿಸುವ ಸುಂದರ ತಾಣ. ಇಲ್ಲಿ ಪ್ರತಿ ದಿನ ಬೆಳಿಗ್ಗೆ 5.30ಕ್ಕೆ ಸರಿಯಾಗಿ ಪ್ರಾರ್ಥನೆ, ಆರಂಭಿಕ ವ್ಯಾಯಾಮಗಳೊಂದಿಗೆ ಶುರುವಾಗುವ ಈ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಮೌನೇಶ ಪೋತ್ನಾಳ ಸುಮಾರು ಒಂದು ತಾಸು ನಾನಾ ಯೋಗಾಸನಗಳ ಅಭ್ಯಾಸದ ಬಗ್ಗೆ ಆಸಕ್ತರಿಗೆ ಹೇಳಿಕೊಡುತ್ತಾರೆ.
ಸರ್ಕಾರಿ ನೌಕರರು, ವರ್ತಕರು, ಉದ್ಯಮಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ನಿವೃತ್ತರು ಸೇರಿದಂತೆ ನಾನಾ ವರ್ಗದ ಸುಮಾರು 90ರಿಂದ 100 ಜನ ಯೋಗಾಸಕ್ತರು ನಿತ್ಯ ಈ ಯೋಗಾಭ್ಯಾಸಕ್ಕೆ ಆಗಮಿಸುತ್ತಾರೆ. ಕೆಲವರು ಹತ್ತು ವರ್ಷಗಳಿಂದ ಈ ಮೌನಮಿತ್ರ ಯೋಗ ಸಮಿತಿಯ ಕಾಯಂ ಸದಸ್ಯರಾಗಿದ್ದಾರೆ. ಹಲವಾರು ಜನ ಮೂರು ತಿಂಗಳು ತರಬೇತಿ ಪಡೆದು, ನಂತರ ಈಗ ಮನೆಯಲ್ಲಿಯೇ ನಿತ್ಯ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.
ಈ ಯೋಗ ಸಮಿತಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ಹೊಸ ಸದಸ್ಯರು ಸೇರ್ಪಡೆಯಾಗುತ್ತಲೇ ಇರುತ್ತಾರೆ. ಹೀಗೆ ಇದುವರೆಗೂ ನೂರಾರು ಜನ ಇಲ್ಲಿ ಯೋಗ ತರಬೇತಿ ಪಡೆದಿದ್ದಾರೆ.
ಈ ಸಮಿತಿಯ ಸದಸ್ಯರು ಪ್ರತಿ ಭಾನುವಾರ ಬೆಳಿಗ್ಗೆ ಯೋಗಾಭ್ಯಾಸದ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಮೂಲಕ ಯೋಗದ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿ ಮೂಡಿಸುವುದು ವಿಶೇಷ.
ಹತ್ತು ವರ್ಷಗಳ ಹಿಂದೆ ಶಿಕ್ಷಕ ಮೌನೇಶ ಪೋತ್ನಾಳ ತಮ್ಮ ನಾಲ್ಕೈದು ಜನ ಸಮಾನ ಮನಸ್ಕ ಗೆಳೆಯರೊಂದಿಗೆ ಆರಂಭಿಸಿದ ಈ ಉಚಿತ ಯೋಗ ತರಬೇತಿ ಇಂದು ನೂರಾರು ಜನರು ಉತ್ತಮ ಆರೋಗ್ಯ, ಉಲ್ಲಾಸದ ಜೀವನ ನಡೆಸಲು ನೆರವಾಗಿದೆ.
ಶಿಕ್ಷಕ ಮೌನೇಶ ಪೋತ್ನಾಳ ದಶಕದ ಹಿಂದೆ ಬೆಂಗಳೂರಿನ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಒಂದು ತಿಂಗಳ ವೈಟಿಟಿಸಿ ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಶಿಬಿರದ ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಚ್.ಎಸ್.ದೊರೆಸ್ವಾಮಿ ಅವರ ಮಾತುಗಳನ್ನು ಮೌನೇಶ ಈಗಲೂ ಸ್ಮರಿಸಿಕೊಳ್ಳುತ್ತಾರೆ.
ಎಚ್.ಎಸ್.ದೊರೆಸ್ವಾಮಿ ಅವರು ತಮ್ಮ ಭಾಷಣದಲ್ಲಿ,‘ನೀವು ಒಂದು ತಿಂಗಳು ಪಡೆದ ಈ ಯೋಗ ತರಬೇತಿ ನಿಮ್ಮ ಸ್ವಂತ ಲಾಭಕ್ಕಷ್ಟೇ ಸೀಮಿತಗೊಳಿಸದೆ, ನಿತ್ಯ ನಾಲ್ಕಾರು ಜನರಿಗೆ ಯೋಗಾಭ್ಯಾಸ ಕಲಿಸಿಕೊಡಿ. ಏಕೆಂದರೆ ನಮ್ಮ ಕರ್ನಾಟಕ ರಾಜ್ಯ ಮಧುಮೇಹದ ರಾಜಧಾನಿಯಾಗುತ್ತಿದೆ. ಅದನ್ನು ಹತೋಟಿಗೆ ತರಬೇಕಾದರೆ ಇಂಥ ಯೋಗಾಭ್ಯಾಸ ಅತಿ ಮುಖ್ಯ’ ಎಂದಿದ್ದರು.
‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಸಲಹೆಯಂತೆ ಕೇವಲ ನಾಲ್ಕೈದು ಜನರಿಂದ ಪ್ರಾರಂಭವಾದ ನಮ್ಮ ಮೌನಮಿತ್ರ ಯೋಗ ಸಮಿತಿ ಈಗ ನಿತ್ಯ 90 ರಿಂದ 100 ಜನರ ಯೋಗಾಭ್ಯಾಸದ ಕೇಂದ್ರವಾಗಿದೆ’ ಎಂದು ಮೌನೇಶ ಸಾರ್ಥಕ ಭಾವದಿಂದ ನುಡಿಯುತ್ತಾರೆ.
ಶಿಕ್ಷಕ ಮೌನೇಶ ಪೋತ್ನಾಳ ಅವರು ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ರಾಜ್ಯಮಟ್ಟದ ಹಲವು ಸಂಘ–ಸಂಸ್ಥೆಗಳ ಯೋಗ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ. ಅವರ ನಿಸ್ವಾರ್ಥದ ಅನನ್ಯ ಸೇವೆಯನ್ನು ಗುರುತಿಸಿ ರಾಯಚೂರು ಜಿಲ್ಲೆ ಸೇರಿದಂತೆ ನಾಡಿನ ಹಲವು ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ನನ್ನ ಶಿಕ್ಷಕ ವೃತ್ತಿಯ ಜತೆಗೆ ಈ ಹತ್ತು ವರ್ಷಗಳ ಅವಧಿಯಲ್ಲಿ ಕೈಗೊಂಡ ನಿತ್ಯ ಯೋಗ ತರಬೇತಿ ಯೋಗದ ಮಹತ್ವದ ಕುರಿತು ಜನಜಾಗೃತಿ ಕಾರ್ಯಗಳು ಹೆಚ್ಚು ತೃಪ್ತಿ ನೀಡಿವೆ.– ಮೌನೇಶ ಪೋತ್ನಾಳ, ಯೋಗ ತರಬೇತುದಾರ
ಮೌನಮಿತ್ರ ಯೋಗ ಸಮಿತಿಯ ನಿತ್ಯ ಯೋಗಾಭ್ಯಾಸ ನಮಗೆ ಉತ್ತಮ ಆರೋಗ್ಯದ ಜತೆಗೆ ಕೆಲಸದಲ್ಲಿ ಒತ್ತಡ ನಿವಾರಣೆಯಾಗಿ ಉತ್ಸಾಹ ಹುಮ್ಮಸ್ಸು ಮೂಡಲು ಸಹಕಾರಿಯಾಗಿದೆ.– ಜಿ.ನಾಗರಾಜ, ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.