ಮಾನ್ವಿ: ಶಾಲೆಗಳು ಪ್ರಾರಂಭಗೊಂಡಿದ್ದು, ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸೇರಿದಂತೆ ಹಲವು ಆಡಳಿತಾತ್ಮಕ ಹುದ್ದೆಗಳು ಖಾಲಿ ಇರುವುದು ಶಾಲಾ ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಮಾನ್ವಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಿಂದ ನೂತನ ಸಿರವಾರ ಹಾಗೂ ಮಸ್ಕಿ ತಾಲ್ಲೂಕುಗಳ ಶಾಲೆಗಳು ಇನ್ನೂ ಬೇರ್ಪಡೆಯಾಗಿಲ್ಲ.
ಸಿರವಾರ ಹಾಗೂ ಮಸ್ಕಿ ತಾಲ್ಲೂಕು ರಚನೆಯಾಗಿ ಏಳು ವರ್ಷಗಳು ಗತಿಸಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಜೂರಾಗದಿರುವುದು ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಇಲಾಖೆಯ ಮೇಲಧಿಕಾರಿಗಳ ಇಚ್ಛಾಶಕ್ತಿಯ ಕೊರತೆಗೆ ಸಾಕ್ಷಿಯಾಗಿದೆ.
ಪ್ರಸ್ತುತ ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 273 ಸರ್ಕಾರಿ ಪ್ರಾಥಮಿಕ ಶಾಲೆಗಳು, 43 ಸರ್ಕಾರಿ ಫ್ರೌಡಶಾಲೆಗಳು, 10 ವಸತಿ ಶಾಲೆಗಳು, 6 ಅನುದಾನಿತ ಪ್ರಾಥಮಿಕ ಶಾಲೆ, ಒಂದು ಅನುದಾನಿತ ಫ್ರೌಡಶಾಲೆ, 80 ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಹಾಗೂ ಫ್ರೌಢಶಾಲೆ, 29 ದ್ವಿಭಾಷಾ ಪದ್ದತಿಯಲ್ಲಿ ಕಲಿಸುವ ಸರ್ಕಾರಿ ನರ್ಸರಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಅಂದಾಜು 67,312 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಖಾಲಿ ಹುದ್ದೆಗಳು: ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 715 , ಸರ್ಕಾರಿ ಫ್ರೌಡಶಾಲೆಗಳಲ್ಲಿ 203 ಕಾಯಂ ಶಿಕ್ಷಕರ ಕೊರತೆ ಇದೆ.
ಮಧ್ಯಾಹ್ನದ ಬಿಸಿಯೂಟ ನಿರ್ವಹಣೆಯ ಹೊಣೆ ಹೊತ್ತಿರುವ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೆಶಕರ ಹುದ್ದೆ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ, ಶಿಕ್ಷಣ ಸಂಯೋಜಕರ 3 ಹುದ್ದೆಗಳು , 24 ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಸಿಆರ್ ಪಿ) ಹುದ್ದೆಗಳಲ್ಲಿ 15 ಹುದ್ದೆಗಳು ಖಾಲಿ ಇವೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಪ್ರಾಥಮಿಕ ಹಂತದಲ್ಲಿ ಮಕ್ಕಳ ದಾಖಲಾತಿ ಕುಸಿತ, ಗುಣಮಟ್ಟದ ಶಿಕ್ಷಣಕ್ಕೆ ತೊಂದರೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಹಿನ್ನಡೆಗೆ ಕಾರಣವಾಗಿದೆ.
ಮೂರು ತಾಲ್ಲೂಕುಗಳ ವಿಶಾಲ ವ್ಯಾಪ್ತಿ ಹೊಂದಿರುವ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಆಡಳಿತಾತ್ಮಕವಾಗಿ ಹಲವು ಹುದ್ದೆಗಳು ಖಾಲಿ ಇರುವ ಕಾರಣ ಶೈಕ್ಷಣಿಕ ಯೋಜನೆಗಳ ಸಮರ್ಪಕ ಅನುಷ್ಠಾನ ಅಸಾಧ್ಯ ಎಂಬುದು ಸಂಘ–ಸಂಸ್ಥೆಗಳ ಮುಖಂಡರ ಅಭಿಪ್ರಾಯ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷಕರ ಕೊರತೆ ಇರುವ ಕಡೆ ಹತ್ತಿರದ ಶಾಲೆಗಳ ಶಿಕ್ಷಕರನ್ನು ಎರವಲು ಸೇವೆಯಾಗಿ ನಿಯೋಜಿಸುವುದರ ಜತೆಗೆ ಅತಿಥಿ ಶಿಕ್ಷಕರನ್ನು ಸಹ ನೇಮಿಸಲಾಗುವುದುಚಂದ್ರಶೇಖರ ದೊಡ್ಡಮನಿ ಬಿಇಒ ಮಾನ್ವಿ
ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಜತೆಗೆ ಸಿರವಾರ ಹಾಗೂ ಮಸ್ಕಿ ತಾಲ್ಲೂಕುಗಳಿಗೆ ಬಿಇಒ ಕಚೇರಿಗಳನ್ನು ಮಂಜೂರು ಮಾಡಬೇಕುಬಿ.ಸಂತೋಷ ಹೂಗಾರ ಸಾಮಾಜಿಕ ಕಾರ್ಯಕರ್ತ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.