ADVERTISEMENT

ಅವೈಜ್ಞಾನಿಕ ಚರಂಡಿ: ಕಲುಷಿತ ವಾತಾವರಣ

ಗಮನ ಹರಿಸದ ಪುರಸಭೆ ಅಧಿಕಾರಿಗಳು: ಆರೋಪ

ಪ್ರಕಾಶ ಮಸ್ಕಿ
Published 2 ಜುಲೈ 2021, 4:29 IST
Last Updated 2 ಜುಲೈ 2021, 4:29 IST
ಮಸ್ಕಿ ಪಟ್ಟಣದ ಧನಗಾರವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ಚರಂಡಿಯ ಕೊಳಚೆ ನೀರು ನಿಂತಿರುವುದು
ಮಸ್ಕಿ ಪಟ್ಟಣದ ಧನಗಾರವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ಚರಂಡಿಯ ಕೊಳಚೆ ನೀರು ನಿಂತಿರುವುದು   

ಪ್ರಕಾಶ ಮಸ್ಕಿ

ಮಸ್ಕಿ: ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಪಟ್ಟಣದ 15ನೇ ವಾರ್ಡ್‌ನ ಧನಗಾರವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಚರಂಡಿ ನೀರಿನಲ್ಲಿ ಶಾಲೆಗೆ ತೆರಳಬೇಕಾದ ಸ್ಥಿತಿ ಬಂದಿರುವುದು ಪುರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಮೂರು ವರ್ಷಗಳ ಹಿಂದೆ ವಿಶೇಷ ಅನುದಾನದಡಿ ₹ 20 ಲಕ್ಷ ವೆಚ್ಚದಲ್ಲಿ 15 ವಾರ್ಡ್‌ನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿ. ಇಂದು ಹಾಳಾಗಿದ್ದು, ಅದರ ಕೊಳಚೆ ನೀರು ಶಾಲಾ ಆವರಣದಲ್ಲಿ ಸಂಗ್ರಹವಾಗುತ್ತಿದೆ!

ADVERTISEMENT

ನಡು ರಸ್ತೆಯಲ್ಲಿ ಚರಂಡಿ ನಿರ್ಮಿಸಲಾಗಿದ್ದು ಸ್ಥಳೀಯ ನಿವಾಸಿಗಳು ತಿರುಗಾಡಲು ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ಪಾಡಂತೂ ಕೇಳ ಬಾರದು. ಶಾಲೆಯ ಈ ಬಡವಾಣೆಯಲ್ಲಿ ವಾಸಿಸುವ ಜನರು ನಿತ್ಯ ಸೊಳ್ಳೆಗಳ ಜೊತೆ ಜೀವನ ಸಾಗಿಸುವಂತಾಗಿದ್ದರೂ ಸಹ ಪುರಸಭೆಯವರು ಈ ಕಡೆ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಶಾಲೆಯ ಮುಂಭಾಗದಲ್ಲಿಯೇ ಚರಂಡಿ ನೀರು ಸಂಗ್ರಹವಾಗುತ್ತಿದ್ದರಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಹಲವಾರು ಬಾರಿ ಪುರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಒಂದು ಕಡೆ ಸ್ವಚ್ಛತೆ ಬಗ್ಗೆ ಮಾತನಾಡುವ ಅಧಿಕಾರಿಗಳು ನೂರಾರು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವ ಶಾಲೆಯ ಮುಂದೆಯೇ ಗಲೀಜು ನಿರ್ಮಾಣವಾಗಿದ್ದರೂ ಸಹ ಚರಂಡಿ ದುರಸ್ತಿಗೊಳಿಸದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಪಾಲಕರೊಬ್ಬರು ತಿಳಿಸಿದರು.

ಪುರಸಭೆ ಅಧಿಕಾರಿಗಳು ಅವೈಜ್ಞಾನಿಕ ಚರಂಡಿ ಸರಿಪಡಿಸಿ, ಶಾಲಾ ವಾತಾವರಣವನ್ನು ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.