ADVERTISEMENT

ಮತದಾರರ ಪರಿವರ್ತನೆಗೆ ಕಸರತ್ತು: ಕಾರ್ಯಕರ್ತರಿಂದ ಮನೆಗಳಿಗೆ ಭೇಟಿ

ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರಿಂದ ಮನೆಗಳಿಗೆ ಭೇಟಿ

ನಾಗರಾಜ ಚಿನಗುಂಡಿ
Published 15 ಏಪ್ರಿಲ್ 2021, 6:19 IST
Last Updated 15 ಏಪ್ರಿಲ್ 2021, 6:19 IST
ಪ್ರತಾಪಗೌಡ ಪಾಟೀಲ
ಪ್ರತಾಪಗೌಡ ಪಾಟೀಲ   

ಮಸ್ಕಿ (ರಾಯಚೂರು): ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಮತದಾನಕ್ಕೆ ಎರಡು ದಿನಗಳು ಉಳಿದಿದ್ದು, ಮತದಾರರ ಮನ ಪರಿವರ್ತಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಕಸರತ್ತು ನಡೆಸಿದ್ದಾರೆ.

ಬೂತ್‌ಮಟ್ಟದ ಜವಾಬ್ದಾರಿ ಪಡೆದ ಬಿಜೆಪಿ ಕಾರ್ಯಕರ್ತರು, ತಮ್ಮ ಪರ ಇಲ್ಲ ಎನ್ನುವ ಮತದಾರರನ್ನು ಗುರಿಯಾಗಿಟ್ಟುಕೊಂಡು ಮನಪರಿವರ್ತಿ ಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರು, ಅವರೊಂದಿಗೆ ಬೇರೆ ಜಿಲ್ಲೆಗಳಿಂದ ಬಂದಿರುವ ಕಾರ್ಯಕರ್ತರು ಹಾಗೂ ಇವರೆಲ್ಲರಿಗೂ ಮಾರ್ಗದರ್ಶನ ಮಾಡುವುದಕ್ಕೆ ಒಬ್ಬರು ಜನಪ್ರತಿನಿಧಿ ಇದ್ದಾರೆ. ಮತದಾರರನ್ನು ಮತ್ತೆ
ಮತ್ತೆ ಭೇಟಿ ಮಾಡಿ ಮನವಿ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಪರ ಮತಯಾಚಿಸಲು ಜಿಲ್ಲೆಯ ವಿವಿಧೆಡೆಯಿಂದ ಕಾರ್ಯಕರ್ತರ ಪಡೆ ಬಂದಿದ್ದು, ಮನೆಮನೆಗೂ ಭೇಟಿ ನೀಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಬ್ಬರು ಮುಖಂಡರು ಜವಾಬ್ದಾರಿ ವಹಿಸಿಕೊಂಡು ಮಾರ್ಗದರ್ಶನ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಬೆಂಬಲಿಸುವ ಮತದಾರರು ಬಿಜೆಪಿಯತ್ತ ಹೋಗದಂತೆ ಮನವಿ ಮಾಡುತ್ತಿದ್ದಾರೆ.

ADVERTISEMENT

ಮತದಾರರನ್ನು ಸೆಳೆಯುವುದಕ್ಕೆ ಆಮಿಷವೊಡ್ಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಪಕ್ಷದ ಚಿಹ್ನೆಗಳನ್ನು ತೆಗೆದಿಟ್ಟು, ಸಾಮಾನ್ಯ ಜನರಂತೆ ಮತದಾರರನ್ನು ಗುಪ್ತವಾಗಿ ಭೇಟಿಮಾಡಿ ಬೆಂಬಲ ಕೋರುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಕಾರಣೀಕರ್ತರಾದ ಪ್ರತಾಪಗೌಡ ಅವರನ್ನು ಗೆಲ್ಲಿಸಲೇಬೇಕು ಎನ್ನುವ ಹಠದೊಂದಿಗೆ ಕಾರ್ಯಕರ್ತರು, ಮುಖಂಡರು ಹಾಗೂ ಸಚಿವರು ತಮ್ಮ ಸಾಮರ್ಥ್ಯ ಒರೆಗಲ್ಲಿಗೆ ಹಚ್ಚಿ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಎರಡು ಸಲ ಶಾಸಕರಾಗಿ ಆಯ್ಕೆಯಾದರೂ ಕಾಂಗ್ರೆಸ್‌ ತೊರೆದಿರುವ ಪ್ರತಾಪಗೌಡ ಪಾಟೀಲ ಅವರಿಗೆ ಪಾಠ ಕಲಿಸಲೆಬೇಕು ಎನ್ನುವ ಪಟ್ಟು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಕಾಂಗ್ರೆಸ್‌ ಬೆಂಬಲಿಸುವ ಮತದಾರರಲ್ಲಿ ಗಟ್ಟಿಯಾಗಿದೆ. 5ಎ ಕಾಲುವೆ ಹೋರಾಟಗಾರರಲ್ಲಿ ಬಹುತೇಕ ರೈತರು ಪ್ರತಾಪಗೌಡರನ್ನು ಸೋಲಿಸಬೇಕು ಎನ್ನುವ ಕರೆಕೊಟ್ಟಿದ್ದಾರೆ.

ಇದೀಗ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲಬಾರದು ಎಂದು ಬಿಜೆಪಿ ಕಾರ್ಯಕರ್ತರ ಬಿಗಿಪಟ್ಟು ಹಾಗೂ ಪ್ರತಾಪಗೌಡರಿಗೆ ಪಾಠ ಕಲಿಸಬೇಕು ಎನ್ನುವವರ ಬಿಗಿಪಟ್ಟು ಎದ್ದು ಕಾಣುತ್ತಿದೆ. ಮತದಾರರನ್ನು ಸೆಳೆಯುವುದಕ್ಕೆ ಬಿಜೆಪಿ ಕಾರ್ಯಕರ್ತರು ಯಾವ ತಂತ್ರ ಅನುಸರಿಸುತ್ತಾರೆ ಎಂಬುದು ಕೂತುಹಲ ಮೂಡಿಸಿದೆ. ಮತದಾರರು ಬಿಜೆಪಿಯತ್ತ ವಾಲದಂತೆ ಕಾಂಗ್ರೆಸ್‌ ಕಾರ್ಯಕರ್ತರು ಯಾವ ತಂತ್ರ ಅನುಸರಿಸುತ್ತಾರೆ ಎಂಬುದು ಚರ್ಚೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.