ADVERTISEMENT

ಮಸ್ಕಿ ಉಪಚುನಾವಣೆ ಫಲಿತಾಂಶ: ರಾಯಚೂರಿನ ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಮತ ಎಣಿಕೆ

ರಾಯಚೂರಿನ ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಮತಗಳ ಎಣಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 13:29 IST
Last Updated 1 ಮೇ 2021, 13:29 IST
ರಾಯಚೂರಿನ ಎಸ್‌ಆರ್‌ಪಿಎಸ್‌ ಕಾಲೇಜಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಶನಿವಾರ ಭೇಟಿನೀಡಿ ಮಸ್ಕಿ ಉಪಚುನಾವಣೆ ಮತಗಳ ಎಣಿಕೆ ಪೂರ್ವಸಿದ್ಧತೆ ಪರಿಶೀಲಿಸಿದರು
ರಾಯಚೂರಿನ ಎಸ್‌ಆರ್‌ಪಿಎಸ್‌ ಕಾಲೇಜಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಶನಿವಾರ ಭೇಟಿನೀಡಿ ಮಸ್ಕಿ ಉಪಚುನಾವಣೆ ಮತಗಳ ಎಣಿಕೆ ಪೂರ್ವಸಿದ್ಧತೆ ಪರಿಶೀಲಿಸಿದರು   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಏಪ್ರಿಲ್‌ 17 ರಂದು ನಡೆದ ಉಪಚುನಾವಣೆ ಫಲಿತಾಂಶ ಭಾನುವಾರ ಹೊರಬೀಳಲಿದೆ.

ನಗರದ ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಮತಗಳ ಎಣಿಕೆಗಾಗಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಶನಿವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲಿಸಿದರು.

ಕೋವಿಡ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುನಾವಣಾ ಆಯೋಗ ಕೆಲವು ನೂತನ ನಿರ್ದೇಶನಗಳನ್ನು ನೀಡಿದೆ, ಅದರಂತೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ, ಒಟ್ಟು ಮೂರು ಎಣಿಕಾ ಕೇಂದ್ರಗಳನ್ನು ಮಾಡಲಾಗಿದೆ, ಹಿಂದೆ ಎರಡು ಇತ್ತು, ಒಂದು ಕೌಂಟಿಂಗ್ ಹಾಲ್‌ನಲ್ಲಿ 4 ಟೇಬಲ್‌ಗಳಿರುತ್ತವೆ, ಒಂದು ರೌಂಡ್‌ನಲ್ಲಿ 12 ಟೇಬಲ್‌ಗಳಿರುತ್ತವೆ, ಅಂಚೆ ಮತಪತ್ರಗಳು ಸೇರಿದಂತೆ ಒಟ್ಟಾರೆ 25 ರಿಂದ 26 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತಗಳ ಎಣಿಕೆಗೆ ಸಮಯ ಹೆಚ್ಚಾಗಬಹುದು, 5 ವಿವಿ ಪ್ಯಾಟ್‌ಗಳ ಎಣಿಕೆಯು ನಡೆಯಲಿದೆ, ಸಂಜೆ 5 ರೊಳಗೆ ಎಣಿಕಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾತಿ ತಿಳಿಸಿದರು.

ADVERTISEMENT

ಎಣಿಕಾ ಕಾರ್ಯಕ್ಕೆ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಣಿಕಾ ಮೇಲ್ವಿಚಾರಕರು, ಸಹಾಯಕರು, ಎಣಿಕಾ ಮೈಕ್ರೋವೀಕ್ಷಕರು ಸೇರಿದಂತೆ ಒಟ್ಟಾರೆ 210 ಅಧಿಕಾರಿ ಸಿಬ್ಬಂದಿ, 290 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶದಂತೆ ಎಲ್ಲಾ ಕೌಟಿಂಗ್ ಎಜೆಂಟರುಗಳಿಗೆ ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಲಾಗಿದೆ, ನೆಗೆಟಿವ್ ವರದಿ ಇದ್ದಲ್ಲೀ ಮಾತ್ರ ಅವರನ್ನು ಒಳಗೆ ಬಿಡಲಾಗುವುದು, ಎಣಿಕೆಗೆ ಸಂಬಂಧಿಸಿದಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ನೆಗೆಟಿವ್ ವರದಿ ಇರಬೇಕು.

ಅದರಂತೆ ಮಾಧ್ಯಮದವರಿಗೆ ನೆಗೆಟಿವ್ ಪ್ರಮಾಣ ಪತ್ರವಿದ್ದಲ್ಲೀ ಮಾತ್ರ ಅವರನ್ನು ಎಣಿಕಾ ಕೇಂದ್ರದೊಳಗೆ ಬಿಡಲಾಗುವುದು, ಎಣಿಕಾ ಕೇಂದ್ರದೊಳಗೆ ಕುಳಿತುಕೊಳ್ಳಲು ಪರಸ್ಪರ ಅಂತರ ಕಾಯ್ದುಕೊಳ್ಳಲಾಗಿದೆ, ಎರಡು ಕೌಂಟಿಂಗ್ ಎಜೆಂಟ್ ಮಧ್ಯೆ ಇರುವವರು ಪಿಪಿ ಕಿಟ್ ಹಾಕಿಕೊಳ್ಳಬೇಕು ಎನ್ನುವ ನಿರ್ದೇಶನ ಬಂದಿದೆ, ಅದನ್ನು ಅಭ್ಯರ್ಥಿಗಳಿಗೆ ಲಿಖಿತವಾಗಿಯೂ ತಿಳಿಸಲಾಗಿದೆ ಎಂದು ಹೇಳಿದರು.

ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವಂತಿಲ್ಲ, ಈಗಾಗಲೇ ಸೆಕ್ಷನ್ 144 ಜಾರಿಗೊಂಡಿದ್ದು, ಗುಂಪು ಸೇರುವಂತಿಲ್ಲ, ಕೌಂಟಿಂಗ್ ಎಜೆಂಟ್‌ಗಳಿಗೆ ಪಿಪಿ ಕಿಟ್ ಹಾಕಿಕೊಂಡು ಬರುವಂತೆ ತಿಳಿಸಲಾಗಿದೆ, ಅವರಿಗೆ ಫೇಸ್ ಶೀಲ್ಡ್, ಅಲ್ಲದೇ ಎನ್-95 ಮಾಸ್ಕ್, ಹ್ಯಾಂಡ್ ಗ್ಲೌಸ್ ಕೂಡ ನೀಡಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಹಾಗೂ ಚುನಾವಣಾಧಿಕಾರಿ ಮತ್ತು ಲಿಂಗಸೂಗೂರು ಸಹಾಯಕಆಯುಕ್ತ ರಾಜಶೇಖರ ಡಂಬಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.