ADVERTISEMENT

ಪ್ರಜಾಪ್ರಭುತ್ವದ ಆಶಯಗಳ ಕಗ್ಗೋಲೆ: ಬಸವರಾಜ ರಾಯರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 12:40 IST
Last Updated 8 ಏಪ್ರಿಲ್ 2021, 12:40 IST
ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ   

ಸಿಂಧನೂರು: ‘ಪ್ರಜಾಪ್ರಭುತ್ವ ಆಶಯಗಳನ್ನು ಕಗ್ಗೋಲೆ ಮಾಡಿ, ವಾಮಮಾರ್ಗದ ಮೂಲಕ ಸರ್ಕಾರ ರಚಿಸಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಈ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ ಬಿಟ್ಟರೆ ಸದಾಚಾರ ಗೊತ್ತಿಲ್ಲ‘ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆಂದು ಹೇಳುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 34 ರಷ್ಟು ಜನ ಬಿಜೆಪಿಗೆ ಮತ ಹಾಕಿದರೆ, ಶೇ 36 ರಷ್ಟು ಜನ ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಅಂದರೆ 1 ಕೋಟಿ 60 ಲಕ್ಷ ಮತಗಳ ಕಾಂಗ್ರೆಸ್‍ಗೆ ಹೆಚ್ಚಿಗೆ ಬಂದಿವೆ. 104 ಸ್ಥಾನ ಬಿಜೆಪಿ ಗೆದ್ದಿತ್ತು. ಬಹುಮತ ಪಡೆಯದಿದ್ದರೂ ಕಾಂಗ್ರೆಸ್‍ನ 14, ಜೆಡಿಎಸ್‍ನ 3 ಜನ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ‘ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಲ ಮಾಡಿ ಸರ್ಕಾರ ನಡೆಸುತ್ತಿರುವುದು ದುರಂತ. ಕೆಇಬಿ ಟೆಂಡರ್, ನೀರಾವರಿ ಯೋಜನೆಗಳಲ್ಲಿ ಶೇ 10 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. ಹಣ ಕೊಡದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಇಷ್ಟೊಂದು ದುರಾಡಳಿತ ರಾಜ್ಯದ ಇತಿಹಾಸದಲ್ಲಿಯೇ ನಡೆದಿಲ್ಲ. ಹೀಗೆ ಬಿಟ್ಟರೆ ಇನ್ನೆರಡು ವರ್ಷ ಅವಧಿಯಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಾರೆ‘ ಎಂದು ಆಪಾದಿಸಿದರು.

ADVERTISEMENT

‘ಶಾಸಕರು ಅಕಾಲಿಕ ಮರಣ ಹೊಂದಿದಾಗ ಮತ್ತು ವಿಧಾನಸಭೆ ಸದಸ್ಯರು ಲೋಕಸಭೆಗೆ ಆಯ್ಕೆಯಾದಾಗ ತೆರವಾದ ಸ್ಥಾನ ತುಂಬಲು ಉಪಚುನಾವಣೆ ನಡೆಸಿದರೆ ಪ್ರಜಾಪ್ರಭುತ್ವ ಒಪ್ಪುತ್ತದೆ. ಬಸವಕಲ್ಯಾಣದಲ್ಲಿ ನಾರಾಯಣರಾವ್, ಬೆಳಗಾವಿಯಲ್ಲಿ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಆದರೆ ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್ ಸತ್ತಿಲ್ಲ. ಬದಲಿಗೆ ದುಡ್ಡಿಗಾಗಿ ತನ್ನನ್ನೇ ಬಿಜೆಪಿಗೆ ಮಾರಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಯಿಸಿದ್ದಾರೆ. ಕ್ಷೇತ್ರದ ಜನತೆ ಅವರ ವಿರುದ್ಧ ರೋಸಿ ಹೋಗಿದ್ದು, ಉಪಚುನಾವಣೆಯಲ್ಲಿ ಆರ್.ಬಸನಗೌಡರಿಗೆ ಆಶೀರ್ವದಿಸಿ ಜನಸೇವೆಗೆ ಅವಕಾಶ ನೀಡಲಿದ್ದಾರೆ’ ಎಂದರು.

‘ವಿಜಯೇಂದ್ರ ಅವರು ಹಣ ಕೊಟ್ಟು ಮತ ಹಾಕಿಸುವಲ್ಲಿ ನಿಸ್ಸೀಮರು. ಹಣ ಮತ್ತು ಜಾತಿ ಅಫೀಮು ಇದ್ದಂತೆ. ಆದರೆ ಬಿಜೆಪಿಯವರು ಈ ಎರಡು ಹೆಸರಿನಲ್ಲಿ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಅಂದರೆ ಲಪಂಗರು ಎಂಬಂತಾಗಿದೆ. ಬಿಜೆಪಿಯವರು ಎಷ್ಟೇ ದುಡ್ಡು ಹಂಚಲಿ. ಅದನ್ನು ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡರಿಗೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ, ಮುಖಂಡರಾದ ಅಮರೇಶ ಪಾಟೀಲ್, ನಿರುಪಾದೆಪ್ಪ ಗುಡಿಹಾಳ ವಕೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.