ADVERTISEMENT

ಮಸ್ಕಿ ಜಲಾಶಯಕ್ಕೆ ಜೀವಕಳೆ

ಪಕ್ಕದ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಬತ್ತಿದ್ದ ಕೆರೆಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 14:09 IST
Last Updated 4 ಜೂನ್ 2019, 14:09 IST
ಮಸ್ಕಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದ್ದು ಸೋಮವಾರ 14 ಅಡಿ ನೀರು ಸಂಗ್ರಹವಾಗಿದೆ
ಮಸ್ಕಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದ್ದು ಸೋಮವಾರ 14 ಅಡಿ ನೀರು ಸಂಗ್ರಹವಾಗಿದೆ   

ಮಸ್ಕಿ: ತಾಲ್ಲೂಕಿನ ನೆರೆಯ ಜಿಲ್ಲೆಗಳಲ್ಲಿ ಮಳೆ ಬೀಳುತ್ತಿರುವುದರಿಂದ ಪಟ್ಟಣದ ಸಮೀಪ ಮಾರಲದಿನ್ನಿಯಲ್ಲಿ ನಿರ್ಮಿಸಿರುವ ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ.

ಸೋಮವಾರ ಒಂದೇ ದಿನಕ್ಕೆ ನಾಲ್ಕು ಅಡಿಗಳಷ್ಟು ನೀರು ಹರಿದು ಬಂದಿದೆ ಎಂದು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಾವುದ್ ತಿಳಿಸಿದ್ದಾರೆ.

8 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಜಲಾಶಯವು 0.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕಳೆದ ಮೂರು ತಿಂಗಳಿನಿಂದ ಬತ್ತಿ ಹೋಗಿತ್ತು. ಇದೀಗ ಮರುಜೀವ ಪಡೆದುಕೊಂಡಂತಾಗಿದೆ.

ADVERTISEMENT

28 ಅಡಿಗಳ ಆಳ ನೀರು ಸಂಗ್ರಹ ಸಾಮರ್ಥ್ಯವಿದ್ದು, ವಾರ 8 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಸೋಮವಾರ 6 ಅಡಿ ನೀರು ಬಂದಿದೆ. 14 ಅಡಿ ನೀರು ಸಂಗ್ರಹವಾಗಿದೆ. ಇನ್ನೂ 14 ಅಡಿ ನೀರು ಬಂದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.

ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದ್ದರಿಂದ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ. ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

’ಕುಷ್ಟಗಿ, ಗಜೇಂದ್ರಗಡ ಮುಂತಾದ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯದ ಒಳ ಹರಿವು ಮತ್ತಷ್ಟು ಹೆಚ್ಚುವ ಸಾದ್ಯತೆ ಇದೆ’ ಎಂದು ಎಂಜಿನಿಯರ್ ದಾವುದ್ ತಿಳಿಸಿದ್ದಾರೆ.

ಜಲಾಶಯದ ಒಳ ಹರಿವು ಹೆಚ್ಚುತ್ತಿರುವ ಕಾರಣ ಜಲಾಶಯದ ಕೆಳ ಭಾಗದಲ್ಲಿ ಬರುವ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಜಲಾಶಯ ಭರ್ತಿಯಾದರೆ ಮಸ್ಕಿ ಹಳ್ಳಕ್ಕೆ ನೀರು ಹರಿಸಲಾಗುತ್ತದೆ. ಇದರಿಂದ ಕುಡಿಯುವ ನೀರಿನ ತೊಂದರೆ ತಪ್ಪಲಿದೆ. ಜಾನುವಾರುಗಳಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.