ADVERTISEMENT

ಮಸ್ಕಿ: ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಆರ್. ಬಸನಗೌಡ ತುರ್ವಿಹಾಳ

ನಾಲ್ಕು ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:39 IST
Last Updated 29 ಜುಲೈ 2025, 5:39 IST
ಮಾರಲದಿನ್ನಿಯ ಮಸ್ಕಿ ಜಲಾಶಯದಲ್ಲಿ ಸೋಮವಾರ ನಡೆದ ನಾಲ್ಕು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿದರು
ಮಾರಲದಿನ್ನಿಯ ಮಸ್ಕಿ ಜಲಾಶಯದಲ್ಲಿ ಸೋಮವಾರ ನಡೆದ ನಾಲ್ಕು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿದರು   

ಮಸ್ಕಿ: ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶಾಸಕ, ಖಾದಿ‌ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.

ಸೋಮವಾರ ತಾಲ್ಲೂಕಿನ ಮೆದಿನಾಳ, ಕನ್ನಾಳ, ಮಾರಲದಿನ್ನಿ,‌ ಅಡವಿಭಾವಿ (ಮಸ್ಕಿ) ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾರಲದಿನ್ನಿ ಜಲಾಶಯ ಸ್ಥಳದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಅಭಿವೃದ್ದಿ ಕೆಲಸಗಳಿಗೆ ಸರ್ಕಾರ ಹಣ ನೀಡುತ್ತಿದೆ. ಅಧಿಕಾರಿಗಳು ಅದನ್ನು ಸರಿಯಾಗಿ ವಿನಿಯೋಗಿಸಬೇಕು. ಟೆಂಡರ್ ಆದ ಕಾಮಗಾರಿಗಳು ನಿಗದಿತ ಅವಧಿಯ ಒಳಗೆ ಮುಗಿದು ಉದ್ಘಾಟನೆಯಾದಗ ಮಾತ್ರ ಸರ್ಕಾರದ ಯೋಜ‌ನೆ ಸದ್ಬಳಕೆಯಾಗುತ್ತದೆ’ ಎಂದರು.

ADVERTISEMENT

‘ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳ‌ ಗುಣಮಟ್ಟದ ಮೇಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕು’ ಎಂದು ಸೂಚಿಸಿದರು.

‘ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಸ್ವಚ್ಛತೆ ಕಡೆ ಹೆಚ್ಚು ಗಮನ ಕೊಡಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಲಧಾರೆ ಯೋಜನೆ ಬಗ್ಗೆ ದೂರುಗಳು ಬರುತ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದನಗೌಡ ಮಾಟೂರು, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ, ಕೆಆರ್‌ಐಡಿಎಲ್‌ ಎಇಇ ಸಾಯಲ್, ಜೆಸ್ಕಾಂ ಎಇಇ ವೆಂಕಟೇಶ, ಎಂಜನಿಯರ್‌ಗಳಾದ ಓಂಕಾರ ಮೂರ್ತಿ, ದಾವುದ್, ತಿಮ್ಮಣ್ಣ ಉಪ್ಪಾರ, ಕಾಶಿನಾಥ, ಪಿಎಸ್ಐ ಮುದ್ದುರಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಇದ್ದರು.

ಶೈಕ್ಷಣಿಕ ಗುಣಮಟ್ಟದ ಸುಧರಾಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಕೊಡಬೇಕು. ವಸತಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಒತ್ತು ನೀಡಬೇಕು
ಅಮರೇಶ ಯಾದವ ಮಸ್ಕಿ ತಾ.ಪಂ ಇಒ

ಕಾಮಗಾರಿಗಳ ಪರಿಶೀಲನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ಪರಿಶೀಲಿಸಿದರು. ಮೆದಿಕಿನಾಳ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಾಳ ಗ್ರಾಮದ ಶಾಲೆಗೆ ಭೇಟಿ ನೀಡಿ ಬಿಸಿಯೂಟ‌ ಹಾಗೂ ಮಕ್ಕಳ ಹಾಜರಾತಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.