ADVERTISEMENT

‘ಅವಕಾಶ ಕೊಟ್ಟರೆ ಅಭಿವೃದ್ಧಿ’

ನಾಗರಾಜ ಚಿನಗುಂಡಿ
Published 11 ಏಪ್ರಿಲ್ 2021, 7:04 IST
Last Updated 11 ಏಪ್ರಿಲ್ 2021, 7:04 IST
ಬಸನಗೌಡ ತುರ್ವಿಹಾಳ
ಬಸನಗೌಡ ತುರ್ವಿಹಾಳ   

ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು, 2018 ರಲ್ಲಿ ಕೇವಲ 213 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಇದೀಗ ಮತ್ತೆ ಕಣದಲ್ಲಿ ಸವಾಲೊಡ್ಡಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ.

* ಮಸ್ಕಿ ಕ್ಷೇತ್ರದಲ್ಲಿ ಮತದಾರರ ಒಲವು ಹೇಗಿದೆ?
– ಒಳ್ಳೆಯ ವಾತಾವರಣ ಇದೆ. ಪ್ರಚಾರಕ್ಕೆ ಹೋದ ಗ್ರಾಮಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಪಕ್ಷದ ನಾಯಕರೂ ಸಹ ನನ್ನ ಪರವಾಗಿ ಹೆಚ್ಚಿನ ಪ್ರಚಾರ ಕೈಗೊಂಡಿದ್ದಾರೆ.

* ‘ಕಾಡಾ‘ ಅಧ್ಯಕ್ಷ ಸ್ಥಾನ ಬಿಟ್ಟು ಕಾಂಗ್ರೆಸ್‌ ಸೇರಿದ್ದೇಕೆ?
– ‘ಕಾಡಾ‘ ಅಧ್ಯಕ್ಷ ಸ್ಥಾನ ನೀಡಿದ್ದರಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಬಿಜೆಪಿಗೆ ಬಂದ ನಂತರ ನಮ್ಮನ್ನು, ನಮ್ಮ ಕಾರ್ಯಕರ್ತರನ್ನು ಹಾಗೂ ಬೆಂಬಲಿಗರನ್ನು ಪಕ್ಷದಿಂದ ಹೊರ ಹಾಕಲು ಪ್ರತಾಪಗೌಡ ಪಾಟೀಲ ಷಡ್ಯಂತ್ರ ಮಾಡಿದ್ದರು. ಏನೇ ವಿಷಯ ಇದ್ದರೂ ನಮ್ಮ ಹತ್ತಿರ ಬನ್ನಿ, ಬೇರೆಯವರ ಬಳಿ ಹೋಗಬೇಡಿ ಎನ್ನುತ್ತಲೇ ಒಳಸಂಚು ರೂಪಿಸುತ್ತಿದ್ದರು. ಪಕ್ಷ ಸಂಘಟನೆಯನ್ನೂ ಸಹ ಅವರನ್ನು ಕೇಳಿಯೇ ಮಾಡಬೇಕು ಎನ್ನುವ ಧೋರಣೆ ಅವರದ್ದಾಗಿತ್ತು. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಅವರ ಮಾತನ್ನೇ ಕೇಳಬೇಕು. ನಮ್ಮದು ಏನೂ ಇಲ್ಲ ಎನ್ನುವಂತೆ ಮಾಡಿದರು. ಇದರಿಂದ ನಾನು ಕಾರ್ಯಕರ್ತರು ಮತ್ತು ಬೆಂಬಲಿಗರ ಅಭಿಪ್ರಾಯ ಪಡೆದು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಬೇಕಾಯಿತು.

ADVERTISEMENT

*5 (ಎ) ಕಾಲುವೆ ಯೋಜನೆ ರೈತರ ಹೋರಾಟದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

–ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಹೋಗಿ ಹೋರಾಟ ನಿಲ್ಲಿಸಿ, ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವೆ ಎಂದು ಮನವರಿಕೆ ಮಾಡಿದ್ದಾರೆ. 2023 ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. 5ಎ ಜಾರಿ ಮಾಡುವುದಾಗಿಯೂ ಅವರು ಹೇಳಿದ್ದಾರೆ.

*ನಿಮ್ಮ ಗೆಲುವಿಗೆ ಇರುವಂತಹ ಪೂರಕ ಅಂಶಗಳು?
– ಬಿಜೆಪಿಯಲ್ಲಿ ಇದ್ದ ಸಮಯದಲ್ಲಿಯೂ ಐದಾರು ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಸೋತರೂ ಸಹ ಮುಂಚೆಯಿಂದಲೂ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಅಭಿಮಾನಿಗಳು, ಬೆಂಬಲಿಗರು ಹಾಗೂ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ನಾಲ್ಕು ಭಾಗಗಳ ಕ್ಷೇತ್ರವಾಗಿರುವ ಮಸ್ಕಿ ವ್ಯಾಪ್ತಿಯಲ್ಲಿನ ಮಾನ್ವಿ ಯಲ್ಲಿ ಎನ್.ಎಸ್.ಬೋಸರಾಜು, ಲಿಂಗಸುಗೂರಿನಲ್ಲಿ ಅಮರೇಗೌಡ ಬಯ್ಯಾಪುರ, ಸಿಂಧನೂರು ಭಾಗಕ್ಕೆ ಬಂದಾಗ ಹಂಪನಗೌಡ ಬಾದರ್ಲಿ, ಕೆ.ಕರಿಯಪ್ಪ ಸೇರಿ ದಂತೆ ಆಯಾ ಭಾಗದ ಮುಖಂಡರ ಬಲವಿದೆ. ಇದರ ಜೊತೆಗೆ ಜನರ ಆಶೀರ್ವಾದ ಇದೆ.

*ಆಡಳಿತದಲ್ಲಿರುವ ಬಿಜೆಪಿಯನ್ನು ಬಿಟ್ಟು ನಿಮಗೆ ಏಕೆ ಮತ ನೀಡಬೇಕು?
–ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಜನರನ್ನು ಮಾರಾಟ ಮಾಡಿ ಮತ್ತೆ ಚುನಾವಣೆಗೆ ಬಂದಿರುವುದಕ್ಕೆ ಮತದಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಭೀಮಾ ನಾಯ್ಕ್ ಅವರಿಗೆ ಪ್ರತಾಪಗೌಡರೇ ಹೇಳಿದ್ದಾರಂತೆ. ‘ನನಗೆ ₹ 40 ಕೋಟಿ ಆಗಿದೆ. ನೀವು ಬಂದಿದ್ದರೆ ಇನ್ನು ಹೆಚ್ಚು ಕೊಡುತಿದ್ದರು’ ಎಂದು ಅವರೇ ಹೇಳಿದ್ದಾರೆ. ಹಿಂದಿನ ಚುನಾವಣೆಯಲ್ಲಿಯೇ ಜನರು ಅವರನ್ನು ತಿರಸ್ಕರಿಸಿದ್ದರು. ಆದರೆ ಕೆಲವೊಂದು ಲೋಪ ದೋಷಗಳಿಂದ ನಾನು ಪರಾಭವ ಆದೆ.

*ಮಸ್ಕಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ಕನಸುಗಳೇನು?
– ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ‌. ಕೆರೆಗಳ ಅಭಿವೃದ್ಧಿ, 5 (ಎ) ಕಾಲುವೆ ಯೋಜನೆ ಸೇರಿ ವಿವಿಧ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಕ್ಷೇತ್ರಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿ ಕೊಡಬೇಕಾಗಿದೆ. ಹೀಗೆ ಎಲ್ಲವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಚಿಂತನೆ ಇದೆ.

* ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡುತ್ತಿದೆಯೆ?
– ಸಾರ್ವಜನಿಕವಾಗಿ ಎಲ್ಲವೂ ಕಣ್ಣ ಮುಂದೆ ಕಾಣುತ್ತಿದೆ. ಬಿಜೆಪಿ ಶೇ 90 ರಷ್ಟು ಅಧಿಕಾರ ದುರುಪಯೋಗ ಮಾಡುತ್ತಿದೆ. ಹಾಡುಹಗಲೇ ದುಡ್ಡು ಹಂಚುವುದು ಕಾಣುತ್ತಿದೆ‌. ಇಷ್ಟೆಲ್ಲ ನಡೆದರೂ ಅಧಿಕಾರಿಗಳು ಏನೂ ಕ್ರಮ ಮಾಡಿಲ್ಲ. ವಿವಿಧ ಇಲಾಖೆಯ ಅಧಿಕಾರಿಗಳು ಅವರ ಪರವಾಗಿ ಕೆಲಸ ಮಾಡುತ್ತಿರುವ ವಾತಾವರಣ ಕಾಣುತಿದೆ. ಈಗಾಗಲೇ ನಮ್ಮ ಪಕ್ಷದಿಂದ ದೂರು ಸಹ ನೀಡಲಾಗಿದೆ. ಅಭಿವೃದ್ಧಿ ಪರವಾಗಿ ಮತ ಕೇಳುತ್ತೇವೆ ಎನ್ನುವ ಅವರು ಈ ರೀತಿಯಾಗಿ ಮಾಡುವುದು ಯಾವ ನ್ಯಾಯ? ಮಸ್ಕಿ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಮೇಲೆ ವಿಶ್ವಾಸ ಇಲ್ಲದ ಕಾರಣಕ್ಕೆ ಹಾಸನ, ಶಿವಮೊಗ್ಗದಿಂದ ಜನರನ್ನು ಕರೆಸಿ ಹಣ ಹಂಚಿದ್ದಾರೆ.

* ಕೊನೆಯದಾಗಿ ಮತದಾರರಲ್ಲಿ ನಿಮ್ಮ ಮನವಿ ಏನು?
- ಕ್ಷೇತ್ರದ ಮತದಾರರಲ್ಲಿ ಕೈ ಮುಗಿದು ಕೇಳಿಕೊಳ್ಳುವುದು ಇಷ್ಟೇ; ನಾನು ನಿಮ್ಮೆಂತೆಯೇ ಒಬ್ಬ ರೈತನ ಮಗನಾಗಿ ರುವುದರಿಂದ ಒಂದು ಬಾರಿ ನೀವೆಲ್ಲ ಆಶೀರ್ವಾದ ಮಾಡಿದರೂ ಅದೃಷ್ಟ ಇಲ್ಲದ ಕಾರಣಕ್ಕೆ ನಾನು ಸೋತಿ ದ್ದೇನೆ. ಈಗ ತಾವೆಲ್ಲ ಆಶೀರ್ವಾದ ಮಾಡಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.