ADVERTISEMENT

ಮಸ್ಕಿ ಉಪಚುನಾವಣೆ ರಂಗೇರಿಸಿದ ಪುಷ್ಪವೃಷ್ಟಿ

ಬಿಸಿಲು ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿದ ಕಾಂಗ್ರೆಸ್‌, ಬಿಜೆಪಿ ನಾಯಕರು

ನಾಗರಾಜ ಚಿನಗುಂಡಿ
Published 6 ಏಪ್ರಿಲ್ 2021, 14:55 IST
Last Updated 6 ಏಪ್ರಿಲ್ 2021, 14:55 IST

ರಾಯಚೂರು: ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸುವ ನಾಯಕರಿಗೆ ಬೇಸಿಗೆ ಬಿಸಿಲು ಬಾಧಿಸಬಹುದು ಎನ್ನುವ ಆತಂಕ ಆರಂಭದಲ್ಲಿತ್ತು. ಆದರೆ, ಪ್ರತಿ ಗ್ರಾಮಗಳಲ್ಲಿಯೂ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರನ್ನು ಬೆಂಬಲಿಗರು ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸುತ್ತಿರುವುದರಿಂದ ಚುನಾವಣೆ ಕಣವು ರಂಗೇರಿದೆ.

ಗ್ರಾಮ, ಪಟ್ಟಣಗಳ ಪ್ರವೇಶ ಮಾರ್ಗದುದ್ದಕ್ಕೂ ನಾಯಕರ ಮೇಲೆ ಎರಡೂ ಬದಿಗಳಲ್ಲಿ ಕಾರ್ಯಕರ್ತರ ತಂಡಗಳು ಬಿಡಿಸಿದ ಹೂವುಗಳನ್ನು ಎರಡು ಬೊಗಸೆಗಳಲ್ಲಿ ಎತ್ತಿ ಸುರಿಯುತ್ತಿದ್ದಾರೆ. ಮಸ್ಕಿ, ತುರ್ವಿಹಾಳ, ಬಳಗಾನೂರು ಸೇರಿದಂತೆ ಕೆಲವು ಕಡೆಗಳಲ್ಲಿ ಜೆಸಿಬಿ ಯಂತ್ರಗಳಲ್ಲಿ ಹೂಗಳ ರಾಶಿ ಹಾಕಿಕೊಂಡು ನಾಯಕರ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.

ಬಿಜೆಪಿ ಉಪಾಧ್ಯಕ್ಷ ಬಿ.ವಿ.ವಿಜಯೇಂದ್ರ, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ, ಮುಖಂಡ ಕೆ. ವಿರೂಪಾಕ್ಷಪ್ಪ ಅವರು ಪ್ರಚಾರ ನಡೆಸಿದ ಕೊಳಬಾಳ, ಗುಡದೂರು, ಗೌಡನಬಾವಿ, ಉದ್ಭಾಳ, ಹಾಲಾಪುರ, ತೋರಣದಿನ್ನಿ, ಹಿರೇದಿನ್ನಿ, ಮಲ್ಲದಗುಡ್ಡ, ಉಟಕನೂರ ಗ್ರಾಮಗಳಲ್ಲಿಯೂ ಹೂಮಳೆ ಸುರಿಸಿ, ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ADVERTISEMENT

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಮುಖಂಡರಾದ ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ, ಎನ್‌.ಎಸ್‌.ಬೋಸರಾಜ, ಹಂಪಯ್ಯ ನಾಯಕ ಅವರು ಪ್ರಚಾರ ನಡೆಸಿದ್ದ ತುರ್ವಿಹಾಳ, ಗುಂಜಳ್ಳಿ, ವಿರೂಪಾಪುರ, ಅರಳಹಳ್ಳಿ, ಗೌಡನಬಾವಿ, ಬಳಗಾನೂರು ಗ್ರಾಮಗಳಲ್ಲಿ ಹೂಮಳೆ ಸುರಿಸಿ ಸ್ವಾಗತಿಸಲಾಯಿತು.

ಈ ಹಿಂದೆ ಲಿಂಗಸುಗೂರು ತಾಲ್ಲೂಕು ವ್ಯಾಪ್ತಿಯಲ್ಲಿದ್ದ ಮಸ್ಕಿ ಕ್ಷೇತ್ರ ವ್ಯಾಪ್ತಿಯ ಪಾಮನಕಲ್ಲೂರು, ಅಮಿನಗಢ, ಮಲ್ಲದಗುಡ್ಡ, ಹಿರೇದಿನ್ನಿ, ತೋರಣದಿನ್ನಿ, ಸಂತೆಕೆಲ್ಲೂರು ಹಾಗೂ ಮೆದಕಿನಾಳ ಗ್ರಾಮಗಳಲ್ಲಿಯೂ ಮಂಗಳವಾರ ಕಾಂಗ್ರೆಸ್‌ ನಾಯಕರಿಗೆ ಹೂಮಳೆ ಸುರಿಸಿ, ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಗಳಿರುವ ಕಡೆಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ನಾಯಕರನ್ನು ಸ್ವಾಗತಿಸಿದ್ದಾರೆ.

ಉಪಚುನಾವಣೆ ಪ್ರಚಾರದ ನಿಮಿತ್ತ ಹೂವಿಗೆ ಉತ್ತಮ ಬೇಡಿಕೆ ಕೂಡ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.