ಮಸ್ಕಿ: ತಾಲ್ಲೂಕಿನ 7,500 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 0.5 ಟಿಎಂಸಿ (29 ಅಡಿ) ಸಾಮರ್ಥ್ಯದ ಮಸ್ಕಿ ಜಲಾಶಯಕ್ಕೆ ಶನಿವಾರ ಬೆಳಗಿನ ಜಾವ ಸಂಪೂರ್ಣ ಭರ್ತಿಯಾಗಿದೆ. ಒಳ ಹರಿವು ಹೆಚ್ಚಿದ್ದರಿಂದ ಶನಿವಾರ ಬೆಳಿಗ್ಗೆಯಿಂದಲೇ 2 ಗೇಟ್‌ಗಳ ಮೂಲಕ 500 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ.
ಕೊಪ್ಪಳ ಹಾಗೂ ಗದಗ ಜಿಲ್ಲೆಯ ಕುಷ್ಟಗಿ, ಗಜೇಂದ್ರಗಡ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವ ಸುರಿದ ಮಳೆಗೆ 10 ಅಡಿ ನೀರು ಸಂಗ್ರಹವಾಗಿದೆ. ಯೋಜನೆಯ ಎಇಇ ಗುರುಮೂರ್ತಿ ಇಡೀ ರಾತ್ರಿ ಸ್ಥಳದಲ್ಲಿಯೇ ಬಿಡಾರ ಹೂಡಿ ಎಲ್ಲಾ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.
ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚಿನ ನೀರನ್ನು ಬಿಡಲಾಗುತ್ತಿರುವುದರಿಂದ ಹಳ್ಳದ ದಂಡೆಯ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ತಹಶೀಲ್ದಾರ್ ಮಲ್ಲಪ್ಪ ಯರಗೋಳ ತಿಳಿಸಿದ್ದಾರೆ.
‘ಮಸ್ಕಿ ಜಲಾಶಯದಿಂದ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿದ್ದು ತಾಲ್ಲೂಕು ಆಡಳಿತ ಹಾಗೂ ಪೊಲೀಸ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ’ ಎಂದು ಯೋಜನೆಯ ಎಂಜನಿಯರ್ ದಾವುದ್ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.