ADVERTISEMENT

ಮಸ್ಕಿ | ‘ಬೇರೆ ಸಮುದಾಯ ಸೇರಿಸಿದರೆ ಹೋರಾಟ’

ವಾಲ್ಮೀಕಿ ನಾಯಕ ಸಮಾಜದಿಂದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:48 IST
Last Updated 27 ಸೆಪ್ಟೆಂಬರ್ 2025, 5:48 IST
ಪರಿಶಿಷ್ಟ ವರ್ಗಕ್ಕೆ ಅನ್ಯ ಜಾತಿಗಳ ಸೇರ್ಪಡೆ ವಿರೋಧಿಸಿ ಮಸ್ಕಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು
ಪರಿಶಿಷ್ಟ ವರ್ಗಕ್ಕೆ ಅನ್ಯ ಜಾತಿಗಳ ಸೇರ್ಪಡೆ ವಿರೋಧಿಸಿ ಮಸ್ಕಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು   

ಮಸ್ಕಿ: ‘ಪರಿಶಿಷ್ಟ ಪಂಗಡ ಪಟ್ಟಿಗೆ ಕುರುಬ ಸೇರಿ ಇತರೆ ಜಾತಿಗಳ ಸೇರ್ಪಡೆಗೆ ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಎಚ್ಚರಿಸಿದರು.

ಪರಿಶಿಷ್ಟ ಪಂಗಡಕ್ಕೆ ಅನ್ಯ ಜಾತಿಗಳ ಸೇರ್ಪಡೆ ವಿರೋಧಿಸಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಗುರುವಾರ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ವಾಲ್ಮೀಕಿ ನಾಯಕ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ವಾಲ್ಮೀಕಿ ನಾಯಕ ಸಮಾಜದ ಸತತ ಹೋರಾಟದ ಫಲವಾಗಿ ಶೇ 3ರಷ್ಟಿದ್ದ ಮೀಸಲಾತಿ ಪ್ರಮಾಣ ಶೇ 7ಕ್ಕೆ ಬಂದಿದೆ. ನಮ್ಮ ಸಮಾಜದ ಏಳಿಗೆ ಸಹಿಸದೆ ಅನ್ಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

ಆತ್ಮಾನಂದ ಸ್ವಾಮೀಜಿ, ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಪ್ರಸನ್ನ ಪಾಟೀಲ, ಗೋವಿಂದಪ್ಪ ನಾಯಕ, ಬಸವರಾಜ ನಾಯಕ, ಮುತ್ತಣ್ಣ ನಾಯಕ, ಜಿ. ವೆಂಕಟೇಶ ನಾಯಕ, ಮೌನೇಶ ನಾಯಕ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಆರ್.ಕೆ. ನಾಯಕ, ನಾರಾಯಣಪ್ಪ ಕಾಸ್ಲಿ, ದೇವಣ್ಣ ನಾಯಕ, ದುರಗೇಶ ನಾಯಕ ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನಾ ಸ್ಥಳದಿಂದ ವಾಲ್ಮೀಕಿ ವೃತ್ತದವರೆಗೆ ನೂರಾರು ಜನರು ಪ್ರತಿಭಟನೆ ಮೆರವಣಿಗೆ ನಡೆಸಿದರು. ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಉಪ ತಹಶೀಲ್ದಾರ್ ಪ್ರಕಾಶ ಬುಳ್ಳಾ ಅವರು ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.