ADVERTISEMENT

ಪ್ರವಾಸಿ ತಾಣವಾಗಿ ಕೆರೆ ಅಭಿವೃದ್ಧಿ: ಶಾಸಕ ಶಿವರಾಜ ಪಾಟೀಲ

ಮಾವಿನಕೆರೆ ಹೂಳೆತ್ತುವ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:34 IST
Last Updated 4 ಜೂನ್ 2021, 15:34 IST
ರಾಯಚೂರಿನ ಮಾವಿನಕೆರೆ ಹೂಳೆತ್ತುವ ಕಾರ್ಯಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಶುಕ್ರವಾರ ಚಾಲನೆ ನೀಡಿದರು
ರಾಯಚೂರಿನ ಮಾವಿನಕೆರೆ ಹೂಳೆತ್ತುವ ಕಾರ್ಯಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಶುಕ್ರವಾರ ಚಾಲನೆ ನೀಡಿದರು   

ರಾಯಚೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾವಿನಕೆರೆ ಹೂಳೆತ್ತುವ ಕಾರ್ಯಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಅವರು ಶುಕ್ರವಾರ ಚಾಲನೆ ನೀಡಿದರು.

ಭಾರತೀಯ ಜೈನ್‌ ಸಂಘ (ಬಿಜೆಎಸ್‌) ನಗರಾಭಿವೃದ್ಧಿ ಪ್ರಾಧಿಕಾರಿ, ಶಿಲ್ಪಾ ಫೌಂಡೇಷನ್‌ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಹೂಳೆತ್ತುವ ಕಾರ್ಯ ಭರದಿಂದ ಆರಂಭಿಸಲಾಗಿದೆ.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಕೆರೆ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹10 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಪಡೆಯುವುದಕ್ಕೆ ಸಹಕರಿಸಲಾಗುವುದು. ಜಿಲ್ಲಾಡಳಿತದ ಮನವಿಗೆ ಬಿಜೆಎಸ್‌ ಮತ್ತು ಶಿಲ್ಫಾ ಫೌಂಡೇಷನ್‌ ಸ್ಪಂದಿಸಿವೆ’ ಎಂದು ತಿಳಿಸಿದರು.

ADVERTISEMENT

ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್‌ ಮಾತನಾಡಿ, ಕೆರೆ ಹೂಳೆತ್ತುವ ಪ್ರಯತ್ನವನ್ನು ಶಾಸಕರು ಮಾಡುತ್ತಿರುವುದು ನಗರಕ್ಕೆ ದೊಡ್ಡ ಕೊಡುಗೆಯಾಗಿದೆ. ಕೆರೆ ಪುನರುಜ್ಜೀವನ ಕಾರ್ಯಕ್ಕೆ ವಿವಿಧ ಸಂಘ–ಸಂಸ್ಥೆಗಳು ಕೈಜೋಡಿಸಿರುವುದು ಅಭಿನಂದನೀಯ ಎಂದರು.

ಭಾರತೀಯ ಜೈನ್‌ ಸಂಘದ ಯೋಜನಾ ನಿರ್ದೇಶಕ ಎಸ್‌.ಕಮಲಕುಮಾರ್‌ ಮಾತನಾಡಿ, ಬಿಜೆಎಸ್‌ನಿಂದ ಈಗಾಗಲೇ ತುಂಟಾಪೂರ, ಗಣಮೂರು ಸೇರಿದಂತೆ ಅನೇಕ ಕಡೆಗಳಲ್ಲಿ ಕೆರೆ ಹೂಳೆತ್ತುವ ಕೆಲಸ ಮಾಡಲಾಗಿದೆ. ಯಾದಗಿರಿಯಲ್ಲಿ ಶಿಲ್ಪಾ ಫೌಂಡೇಷನ್‌ನಿಂದ ಕೈಗೊಂಡಿದ್ದ ಕೆರೆ ಹೂಳೆತ್ತುವ ಕಾಮಗಾರಿಯನ್ನು ನೀತಿ ಆಯೋಗವು ಪ್ರಶಂಸಿ ₹1 ಕೋಟಿ ಬಹುಮಾನವನ್ನು ನೀಡಿದೆ. ಅದೇ ರೀತಿ ರಾಯಚೂರಿನಲ್ಲಿಯೂ ಕೆರೆಗಳ ಹೂಳೆತ್ತುವ ಕಾರ್ಯ ಆರಂಭಿಸಿದ್ದು, ಜಿಲ್ಲಾಡಳಿತದ ಸಹಕಾರ ಮುಖ್ಯ ಎಂದರು.

ಶಿಲ್ಪಾ ಫೌಂಡೇಷನ್‌ನ ವಿಷ್ಣುಕಾಂತ ಬೂತಡಾ ಮಾತನಾಡಿ, ಕೆರೆಗಳ ಹೂಳೆತ್ತುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ವಾಯುವಿಹಾರಕ್ಕೂ ಅನುಕೂಲವಾಗುವುದರ ಜೊತೆಗೆ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರ ವೈ.ಗೋಪಾಲರೆಡ್ಡಿ, ಮುಖಂಡರಾದ ರವೀಂದ್ರ ಜಲ್ದಾರ್‌, ಕಡಗೋಳ ಆಂಜನೇಯ್ಯ, ನಗರಸಭೆ ಸದಸ್ಯ ಬಿ.ರಮೇಶ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಭೀಮಣ್ಣ ಮಂಚಾಲ, ಶೇಖರ ವಾರದ, ಚಂದ್ರಶೇಖರ ಹಾಗೂ ಭಾರತೀಯ ಜೈನ್‌ ಸಂಘದ ಅಧ್ಯಕ್ಷ ದಿನೇಶ ದಫ್ತಾರಿ, ಅಜೀತ್‌ ಸಂಜೇಶಿ, ನರೇಶ, ಬಿ.ಗೋವಿಂದ, ಪೌರಾಯುಕ್ತ ವೆಂಕಟೇ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.