ADVERTISEMENT

ರಾಯಚೂರು: ಸ್ಪೃಶ್ಯ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಲು ಶಿಫಾರಸು ಮಾಡಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:38 IST
Last Updated 20 ಜುಲೈ 2020, 15:38 IST
ರಾಯಚೂರಿನಲ್ಲಿ ಕರ್ನಾಟಕ ಅಸ್ಪೃಶ್ಯ ಸಮಾಜಗಳ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಕರ್ನಾಟಕ ಅಸ್ಪೃಶ್ಯ ಸಮಾಜಗಳ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ರಾಯಚೂರು: ಪರಿಶಿಷ್ಟ ಜಾತಿಯ ಸಂವಿಧಾನ ದತ್ತ ಶೇ 15 ರಷ್ಟು ಮೀಸಲಾತಿ ಸ್ಪೃಶ್ಯ ಜಾತಿಗಳ ಪಾಲಾಗುತ್ತಿದೆ. ಸಂವಿಧಾನದತ್ತವಾಗಿ ಆದ ಲೋಪ ಸರಿಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕರ್ನಾಟಕದ ಅಸ್ಪೃಶ್ಯ ಸಮಾಜಗಳ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಅಸೃಶ್ಯ ಸಮಾಜದ ಮಾದಿಗ ಸಂಬಂಧಿತ 57 ಉಪ ಜಾತಿಗಳು, ಛಲವಾದಿ ಸಂಬಂಧಿತ 28 ಉಪ ಜಾತಿಗಳಾದ ಮೋಚಿ, ಸಮಗಾರ, ಡೋಹರ, ಹರಳಯ್ಯ, ಚನ್ನದಾಸರ, ಮಾಲಾದಾಸ ಸೇರಿದಂತೆ ಹಲವು ಜಾತಿಗಳಿವೆ. ಶೇ 15 ಮೀಸಲಾತಿ ಪಟ್ಟಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಅವಕಾಶವಾದಿ ರಾಜಕಾರಣದಿಂದಾಗಿ ಅಸ್ಪೃಶ್ಯರಲ್ಲದ ಭೋವಿ, ಕೊರಮ, ಕೊಂಚಾ, ಬಂಜಾರ ಇತ್ಯಾದಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಕರ್ನಾಟಕ ರಾಜ್ಯದಲ್ಲಿ ಮಾತ್ರ ಸೇರ್ಪಡೆಯಾಗಿದ್ದು, ಇದು ಅಸಂವಿಧಾನಿಕವಾಗಿ ಮಾಡಲಾಗಿದೆ. ಇದರಿಂದಾಗಿ ಅಸ್ಪೃಶ್ಯರ ಮೂಲ ಹಕ್ಕುಗಳಾದ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿಯ ಪಾಲಿನ ಶೇ 90 ರಷ್ಟು ಸೃಶ್ಯ ಜಾತಿಗಳು ಕಬಳಿಸುತ್ತಿವೆ ಎಂದು ದೂರಿದರು.

ಸರ್ವೋಚ್ಛ ನ್ಯಾಯಾಲಯ ಫೆಬ್ರುವರಿ 14 ರಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷರಿಗೆ ಸೂಚನೆ ನೀಡಿ ಕರ್ನಾಟಕ ರಾಜ್ಯದಲ್ಲಿನ ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕಾರಣಗಳನ್ನು ವಿವರವಾಗಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ADVERTISEMENT

ಪರಿಶಿಷ್ಟ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಮೂಲಕ ಸರ್ವೋಚ್ಛ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ಸಲ್ಲಿಸುವಂತೆ ಹೇಳಿದ್ದು, ಸರ್ಕಾರ ಈ ಕೂಡಲೇ ಸಂವಿಧಾನಿವಾಗಿ ಆದ ಲೋಪವನ್ನು ಸರಿಪಡಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ಈ ಬಗ್ಗೆ ಶಿಫಾರಸು ಮಾಡಿ ಸಮುದಾಯದ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಮಹಾಸಭಾದ ಪದಾಧಿಕಾರಿಗಳಾದ ಎಂ.ವಿರುಪಾಕ್ಷಿ, ರವೀಂದ್ರನಾಥ ಪಟ್ಟಿ, ಅಂಬಣ್ಣ ಅರೋಲಿಕರ್, ನರಸಪ್ಪ ದಂಡೋರ, ಭೀಮರಾಜ, ಬಾಲಚಂದ್ರ ಮಸ್ಕಿ, ವಿಶ್ವನಾಥ ಪಟ್ಟಿ, ರಾಜು ಪಟ್ಟಿ, ಭೀಮರಾಯ, ಎಂ.ಈರಣ್ಣ, ಹೇಮರಾಜ ಸ್ಕಿಹಾಳ,ಜನಾರ್ಧನ ಹಳ್ಳಿಬೆಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.