ADVERTISEMENT

ಮಿನಿ ವಿಧಾನಸೌಧದಲ್ಲಿ ವಿಚಾರಣೆ!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:31 IST
Last Updated 3 ಏಪ್ರಿಲ್ 2020, 16:31 IST
ಲಿಂಗಸುಗೂರಲ್ಲಿ ಶುಕ್ರವಾರ ಮೈಸೂರು, ಬೆಂಗಳೂರು ಜಮಾತೆಗೆ ಹೋಗಿದ್ದ ಮುಸ್ಲಿಂ ಬಾಂಧವರ ವಿಚಾರಣೆಯನ್ನು ಮಿನಿ ವಿಧಾನಸೌಧದಲ್ಲಿ ನಡೆಸಲಾಯಿತು
ಲಿಂಗಸುಗೂರಲ್ಲಿ ಶುಕ್ರವಾರ ಮೈಸೂರು, ಬೆಂಗಳೂರು ಜಮಾತೆಗೆ ಹೋಗಿದ್ದ ಮುಸ್ಲಿಂ ಬಾಂಧವರ ವಿಚಾರಣೆಯನ್ನು ಮಿನಿ ವಿಧಾನಸೌಧದಲ್ಲಿ ನಡೆಸಲಾಯಿತು   

ಲಿಂಗಸುಗೂರು: ಮೈಸೂರು ಮತ್ತು ಬೆಂಗಳೂರು ಜಮಾತೆಗೆ ಹೋಗಿ ಬಂದಿರುವ ಸ್ಥಳೀಯ 13ಕ್ಕೂ ಹೆಚ್ಚು ಮುಸ್ಲಿಂ ಬಂಧುಗಳ ವೈದ್ಯಕೀಯ ವಿಚಾರಣೆ, ತಪಾಸಣೆ ಸ್ಥಳೀಯ ಮಿನಿ ವಿಧಾನಸೌಧ (ಕಂದಾಯ ಕಚೇರಿ) ಒಳಗಡೆ ನಡೆಸಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಶುಕ್ರವಾರ ಮಿನಿ ವಿಧಾನಸೌಧದ ಒಳಗಡೆ ಜಮಾತೆಗೆ ಹೋಗಿದ್ದ 13 ಜನ ಹಾಗೂ ಇತರೆ ಮುಸ್ಲಿಂ ಬಾಂಧವರು ಏಕಾಏಕಿ ಜಮಾ ಆಗುತ್ತಿರುವುದು ಕಂಡ ಕಂದಾಯ ನೌಕರರು ತಬ್ಬಿಬ್ಬಾದ ಪ್ರಸಂಗ ಜರುಗಿತು.

ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ವೈದ್ಯಕೀಯ ವಿಚಾರಣೆ ನಡೆಸುತ್ತಿರುವುದು ಭಾರಿ ಕುತೂಹಲ ಮೂಡಿಸಿತ್ತು.

ADVERTISEMENT

ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಹೋಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ಬಗ್ಗೆ ಸಂಶಯವಿಲ್ಲ. ತಾವು 14 ದಿನ ಮನೆಯಿಂದ ಹೊರಗಡೆ ಬರಬಾರದು. ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ತಿಳಿ ಹೇಳುತ್ತಿರುವುದು ಕಂಡು ಬಂತು.

ಈ ಕುರಿತು ತಹಶೀಲ್ದಾರ್‌ ಚಾಮರಾಜ ಪಾಟೀಲ ಅವರನ್ನು ಸಂಪರ್ಕಿಸಿದಾಗ ಮಿನಿ ವಿಧಾನಸೌಧದಲ್ಲಿ ಅಂತ ಯಾವುದೇ ವಿಚಾರಣೆ, ಪರೀಕ್ಷೆಗಳು ನಡೆದಿಲ್ಲ. ಆಕಸ್ಮಿಕ ತಹಶೀಲ್ದಾರ್‌ ಕಚೇರಿಗೆ ಬಂದಿದ್ದ ಜಮಾತೆ ಜನರಿಗೆ ಮಿನಿವಿಧಾನಸೌಧ ಹೊರಗಡೆಯೆ ತಿಳುವಳಿಕೆ ನೀಡಿ ಕಳುಹಿಸಲಾಗಿದೆ’ ಎಂದು ಹೇಳಿಕೊಂಡರು.

ಉಪ ವಿಭಾಗಾಧಿಕಾರಿ ಡಾ. ರಾಜಶೇಖರ ಡಂಬಳ ಅವರನ್ನು ಸಂಪರ್ಕಿಸಿದಾಗ, ‘ಜಮಾತೆಗೆ ಹೋಗಿ ಬಂದವರ ವಿಚಾರಣೆಗೆ ಆರೋಗ್ಯ ಇಲಾಖೆಗೆ ಸೂಚಿಸಲಾಗುತ್ತು. ಆದರೆ, ಮಿನಿವಿಧಾನಸೌಧ ಬಳಸಿಕೊಂಡಿದ್ದು ಮಾಹಿತಿ ಇಲ್ಲ. ಹಾಗೇನಾದರು ಬಳಸಿಕೊಂಡಿದ್ದರೆ ಎಚ್ಚರಿಕೆ ನೀಡಲಾಗುವುದು’ ಎಂದು ಸ್ಪಷ್ಠಪಡಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ ಮಾತನಾಡಿ, ‘ಜಮಾತೆಗೆ ಹೋಗಿ ಬಂದಿರುವವರ ಸಮಗ್ರ ಮಾಹಿತಿ ಮಾತ್ರ ಸಂಗ್ರಹಿಸಿದ್ದೇವೆ. ನಿಗದಿತ ಅವಧಿಯ ಮುಗಿಯುವವರೆಗೆ ಮನೆಯಿಂದ ಹೊರಗಡೆ ಬಾರದಂತೆ ಸೂಚಿಸಲಾಗಿದೆ. ಯಾವುದೇ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿಲ್ಲ’ ಎಂದು ತಿಳಿಸಿದರು.

ಸಂಘಟನೆಗಳ ಆಕ್ರೋಶ: ಜಮಾತೆಗೆ ಹೋಗಿ ಬಂದವರ ಆರೋಗ್ಯ, ವೈದ್ಯಕೀಯ ವಿಚಾರಣೆಗಳು ಇಲಾಖೆ ನಿಗದಿಪಡಿಸಿದ ಸ್ಥಳದಲ್ಲಿಯೆ ನಡೆಯಬೇಕು. ನಿತ್ಯ ನೂರಾರು ರೈತರು ಬಂದು ಹೋಗುವ ಮಿನಿವಿಧಾನ ಸೌಧದಲ್ಲಿ ನಡೆಸಿರುವುದು ನಿಯಮ ಉಲ್ಲಂಘನೆಯಾಗುತ್ತದೆ ಎಂದು ಬಹುತೇಕ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.