
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹಾಗೂ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಜಂಟಿಯಾಗಿ ದೀಪ ಬೆಳಗಿಸಿದರು.
ರಾಯಚೂರು: ‘ಬಂಡವಾಳ ಶಾಹಿಗಳು ಪತ್ರಿಕೋದ್ಯಮದಲ್ಲಿ ಪ್ರವೇಶ ಮಾಡುತ್ತಿರುವ ಕಾರಣ ಪತ್ರಕರ್ತರು ನಿರ್ಭಿಡೆ ಹಾಗೂ ನಿಸ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತಿದೆ. ಇಂತಹ ಸವಾಲುಗಳ ಮಧ್ಯೆಯೂ ಸಮಾಜದ ಒಳಿಗಾಗಿ ಪತ್ರಕರ್ತರು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ’ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ರಾಯಚೂರು ರಿಪೋರ್ಟರ್ಸ್ ಗಿಲ್ಡ್, ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರವು ಸಹ ಮಹತ್ವದ್ದಾಗಿದೆ. ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಯೋಚಿಸಬೇಕು ಹಾಗೂ ಕರ್ತವ್ಯ ನಿರ್ವಹಿಸಬೇಕು’ ಎಂದರು.
‘ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಇಂದಿಗೂ ನಮ್ಮ ನಡುವೆ ಇದ್ದಾರೆ. ಪತ್ರಕರ್ತರ ಪರಿಸ್ಥಿತಿ ಕಠಿಣವಾಗಿದ್ದರೂ ಪ್ರಾಮಾಣಿಕವಾಗಿ ವರದಿಗಾರಿಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಪತ್ರಕರ್ತರ ಹಿತವನ್ನು ಗಮನದಲ್ಲಿಸಿಕೊಂಡು ಅವರಿಗಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅನೇಕ ಪತ್ರಕರ್ತರಿಗೆ ವೃತ್ತಿ ಬುನಾದಿಯನ್ನು ನೀಡಿವೆ’ ಎಂದು ತಿಳಿಸಿದರು.
‘ಪತ್ರಕರ್ತರಿಗೆ ಅನುಕೂಲವಾಗುವಂತೆ ವಾರ್ತಾ ಇಲಾಖೆಗೆ ಹೊಸ ವಾಹನ ಒದಗಿಸಲಾಗಿದೆ. ಪತ್ರಿಕಾ ಭವನಕ್ಕೂ ಸೌಕರ್ಯ ಕಲ್ಪಿಸಿದ್ದೇವೆ. ಮುಂದೆಯೂ ಅನುದಾನ ಕೊಡುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.
ರಿಪೋರ್ಟರ್ಸ್ ಗಿಲ್ಡ್ ವೆಬ್‌ಸೈಟ್ ಉದ್ಘಾಟಿಸಿದ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿ, ‘ಪತ್ರಿಕೋದ್ಯಮಕ್ಕೆ ಬರುವ ಹೊಸಬರಿಗೆ ಸರಿಯಾದ ತರಬೇತಿ ಕೊಡುವ ಅಗತ್ಯವಿದೆ. ಸಾಮಾಜಿಕ ಜಾಲತಾಣದ ಪರಿಣಾಮ ಸರಿ ತಪ್ಪು ಅರ್ಥ ಮಾಡಿಕೊಳ್ಳದೇ ಸುದ್ದಿಗಳನ್ನು ಹರಿಯ ಬಿಡುವ ಪ್ರವೃತ್ತಿ ಹೆಚ್ಚುತ್ತಿದೆ. ಸರಿಯಾದ ತರಬೇತಿ ಇದ್ದರೆ ಹೊಸಬರು ಸಹ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದರು.
‘ಪತ್ರಕರ್ತರಿಗೆ ನಿರಂತರ ಓದು ಇರಬೇಕು. ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಪತ್ರಿಕೋದ್ಯಮ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ. ಪತ್ರಕರ್ತರ ಘನತೆಯೂ ಹೆಚ್ಚುತ್ತದೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ ಮಾತನಾಡಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ., ಹಿರಿಯ ಪತ್ರಕತ್ರರಾದ ಡಿ.ಕೆ.ಕಿಶನ್‌ರಾವ್, ಜಗನ್ನಾಥ ದೇಸಾಯಿ, ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಪಿ.ಚನ್ನಬಸವ ಬಾಗಲವಾಡ, ಪ್ರಧಾನ ಕಾರ್ಯದರ್ಶಿ ಖಾನ್‌ಸಾಬ್ ಮೋಮಿನ್ ಉಪಸ್ಥಿತರಿದ್ದರು.
ಸತ್ಯವಂತಿ ದೇಶಪಾಂಡೆ ಪ್ರಾರ್ಥನೆ ಗೀತೆ ಹಾಡಿದರು. ವೆಂಕಟೇಶ ಹೂಗಾರ ಪ್ರಾಸ್ತಾವಿಕವಾಗಿ ಮತನಾಡಿದದರು. ಸಣ್ಣ ಈರಣ್ಣ ಹಾಗೂ ಶ್ರೀಕಾಂತ ಸಾವೂರ ನಿರೂಪಿಸಿದರು.
ಚಂದ್ರಕಾಂತಗೆ ಅತ್ಯುತ್ತಮ ವರದಿಗಾರಿಕೆ ಪ್ರಶಸ್ತಿ
‘ಪ್ರಜಾವಾಣಿ’ಯ ಹಿರಿಯ ವರದಿಗಾರ ಚಂದ್ರಕಾಂತ ಮಸಾನಿ ಅವರಿಗೆ ಅತ್ಯುತ್ತಮ ವರದಿಗಾರಿಕೆಗೆ ಕೊಡುವ ದಿ.ಹನುಮಂತರಾಯ ಗೌಡ ಪ್ರಶಸ್ತಿ ಅಮೋಘ ಕೇಬಲ್ ವರದಿಗಾರ ನಿವಾಸ ಕೆ. ಹಾಗೂ ಪ್ರಜಾಪ್ರಸಿದ್ದ ವರದಿಗಾರ ಬಿ. ರಾಜು ಅವರಿಗೆ ಅತ್ಯುತ್ತಮ ವರದಿಗಾರಿಕೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಪತ್ರಕರ್ತ ರಘುನಾಥ ರೆಡ್ಡಿ ಮನ್ಸಲಾಪೂರು ಅವರಿಗೆ ಸ್ಮರಣಿಕೆ ಹಾಗೂ ₹ 25 ಸಾವಿರ ನಗದು ಪುರಸ್ಕಾರ ಒಳಗೊಂಡ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರಿಕೆಟ್ ಟೂರ್ನಿಯಲ್ಲಿ ವಿಜೇತ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ತಂಡಕ್ಕೆ ಟ್ರೋಫಿ ಪ್ರದಾನ ಮಾಡಲಾಯಿತು.
ಎರಡನೇ ಸ್ಥಾನ ಪಡೆದ ಅರಣ್ಯ ಇಲಾಖೆಯ ತಂಡ ಮೂರನೇ ಸ್ಥಾನ ಪಡೆದ ಪೊಲೀಸ್ ಇಲಾಖೆಯ ತಂಡ ಹಾಗೂ ನಾಲ್ಕನೇ ಸ್ಥಾನ ಪಡೆದ ಎಲೆಕ್ಟ್ರಾನಿಕ್ ಮಿಡಿಯಾ ತಂಡಕ್ಕೂ ಟ್ರೋಫಿಗಳನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.