ADVERTISEMENT

ರಾಯಚೂರು ವಿವಿಗೆ ₹ 2 ಕೋಟಿ: ಶಾಸಕ ಬಸನಗೌಡ ದದ್ದಲ್ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 14:49 IST
Last Updated 28 ಸೆಪ್ಟೆಂಬರ್ 2021, 14:49 IST
ರಾಯಚೂರು ವಿಶ್ವವಿದ್ಯಾಲಯಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರು ಮಂಗಳವಾರ ಭೇಟಿನೀಡಿ ಮಾತನಾಡಿದರು. ಕುಲಪತಿ ಡಾ.ಹರೀಶ ರಾಮಸ್ವಾಮಿ, ಕುಲಸಚಿವ ಪ್ರೊ.ವಿಶ್ವನಾಥ ಎಂ., ಕುಲಸಚಿವ (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ ಎಂ. ಇದ್ದರು
ರಾಯಚೂರು ವಿಶ್ವವಿದ್ಯಾಲಯಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರು ಮಂಗಳವಾರ ಭೇಟಿನೀಡಿ ಮಾತನಾಡಿದರು. ಕುಲಪತಿ ಡಾ.ಹರೀಶ ರಾಮಸ್ವಾಮಿ, ಕುಲಸಚಿವ ಪ್ರೊ.ವಿಶ್ವನಾಥ ಎಂ., ಕುಲಸಚಿವ (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ ಎಂ. ಇದ್ದರು   

ರಾಯಚೂರು: ‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ನೂತನ ರಾಯಚೂರು ವಿಶ್ವವಿದ್ಯಾಲಯಕ್ಕೆ ₹2 ಕೋಟಿ ಅನುದಾನ ನೀಡಲಾಗುವುದು’ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭರವಸೆ ನೀಡಿದರು.

ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿನೀಡಿ ಕುಲಪತಿ ಮತ್ತು ಕುಲಸಚಿವರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದರು.
‘ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ₹2 ಕೋಟಿ ಅನುದಾನ ವಿಶ್ವವಿದ್ಯಾಲಯದ ಅಗತ್ಯಕ್ಕೆ ಬಲಸಿಕೊಳ್ಳಬೇಕು. ಯಾವುದೇ ಕೆಲಸವನ್ನು ನಮ್ಮ ವೃತ್ತಿ ನಮ್ಮ ಜನ್ಮ ಭೂಮಿ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಯತ್ತ ಸಾಗಲು ಸಾಧ್ಯ’ ಎಂದು ಹೇಳಿದರು.

ವಿಶ್ವವಿದ್ಯಾಲಯವು 371(ಜೆ)ಗೆ ಬರುವಂತ ಅನುದಾನ ಬಳಸಲು ಅವಕಾಶವಿದೆ. ಏಮ್ಸ್, ವಿಮಾನ ನಿಲ್ದಾಣ ಹಾಗೂ ರಾಯಚೂರು ವಿಶ್ವವಿದ್ಯಾಲಯದ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

ADVERTISEMENT

ಶಿಕ್ಷಣ, ಅಭಿವೃದ್ಧಿ ಹಾಗೂ ಉದ್ಯೋಗ ಈ ಮೂರು ಪ್ರಮುಖ ಅಂಶಗಳು ಸಾಮಾಜಿಕ ಚಿತ್ರಣವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಸರ್ಕಾರದ ಜೊತೆ ಸಂಬಂಧಿಸಿದ ಇಲಾಖೆ, ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ರಾಯಚೂರು ವಿಶ್ವವಿದ್ಯಾಲಯದ ಸಮೃದ್ಧಿಯಾಗಿ ಅಭಿವೃದ್ಧಿ ಮಾಡಲು ಪ್ರತಿಯೊಬ್ಬರು ಶ್ರಮಿಸೋಣ. ಅತಿಥಿ ಉಪನ್ಯಾಸಕರು ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ವರ್ಗದವರ ಕುಂದು ಕೊರತೆ ಹಾಗೂ ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯಗಳ ಅಗತ್ಯತೆ ಕುರಿತು ಚರ್ಚಿಸಿದರು.

ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ರಾಯಚೂರು ವಿಶ್ವವಿದ್ಯಾಲಯವನ್ನು ಆದರ್ಶ ವಿಶ್ವವಿದ್ಯಾಲಯವನ್ನಾಗಿ ಕಟ್ಟಬೇಕೆನ್ನುವ ಧೃಡ ಸಂಕಲ್ಪದಿಂದ ಕಾರ್ಯ ಆರಂಭಿಸಲಾಗಿದೆ ಎಂದರು.

ಯುಜಿಸಿ 2 ಎಫ್ ಮಾನ್ಯತೆ ನೀಡಿದ್ದರೂ ಬೋಧಕ ಸಿಬ್ಬಂದಿ ಆಗದಿದ್ದರೆ ಯುಜಿಸಿಯ 12ಬಿ ಮಾನ್ಯತೆ ಸಿಗುವುದಿಲ್ಲ. ಕೇವಲ 88 ಅತಿಥಿ ಉಪನ್ಯಾಸಕರಿಂದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಮೂವರು ಪ್ರಾಧ್ಯಾಪಕರು ಹಾಗೂ ಏಳು ಬೋಧಕೇತರ ಸಿಬ್ಬಂದಿ ಕಾಯಂ ನೌಕರರಾಗಿದ್ದು ವಿಶ್ವವಿದ್ಯಾಲಯದಲ್ಲಿ ಅನೇಕ ಸಿಬ್ಬಂದಿ ಆರು ತಿಂಗಳುಗಳಿಂದ ವೇತನ ರಹಿತವಾಗಿ ಶ್ರಮವಹಿಸಿ ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತೀವ್ರತರವಾದ ಮಾನವ ಸಂಪನ್ಮೂಲ ಕೊರತೆ ಇದೆ ಎಂದು ಹೇಳಿದರು.

ಕುಲಸಚಿವ ಪ್ರೊ.ವಿಶ್ವನಾಥ ಎಂ., ಕುಲಸಚಿವ (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ ಎಂ., ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ್, ಸಿಡಿಸಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ನುಸ್ರತ್ ಫಾತಿಮಾ, ದೈಹಿಕ ಶಿಕ್ಷಣ ನಿರ್ದೇಶಕ ವಾಸುದೇವ ಜೇವರ್ಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.