ADVERTISEMENT

ಶಾಸಕರು ರಾಜರಲ್ಲ ಜನರ ಸೇವಕರು: ಹೂಲಗೇರಿ

ಲಿಂಗಸುಗೂರಿನ ಐತಿಹಾಸಿಕ ಕರಡಕಲ್ಲ ಕೆರೆ ಅಭಿವೃದ್ಧಿ, ಸಾರ್ವಜನಿಕ ಉದ್ಯಾನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:58 IST
Last Updated 7 ಫೆಬ್ರುವರಿ 2023, 4:58 IST
ಲಿಂಗಸುಗೂರಿನ ಸಾರ್ವಜನಿಕ ಉದ್ಯಾನ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ನಗೆ ಹಬ್ಬದ ಕಾರ್ಯಕ್ರಮವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಉದ್ಘಾಟಿಸಿದರು
ಲಿಂಗಸುಗೂರಿನ ಸಾರ್ವಜನಿಕ ಉದ್ಯಾನ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ನಗೆ ಹಬ್ಬದ ಕಾರ್ಯಕ್ರಮವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಉದ್ಘಾಟಿಸಿದರು   

ಲಿಂಗಸುಗೂರು: ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದ ನಾವು ರಾಜರಂತೆ ಮೆರೆಯುವುದಕ್ಕಲ್ಲ. ಕ್ಷೇತ್ರದ ಜನ ಸಾಮಾನ್ಯರ ಸೇವಕರಾಗಿ ಕೆಲಸ ಮಾಡುವವರು’ ಎಂದು ಶಾಸಕ ಡಿ.ಎಸ್‍ ಹೂಲಗೇರಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸಾರ್ವಜನಿಕ ಉದ್ಯಾನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ರಾಜಕೀಯ ಗುರು ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಅಭಿಮಾನಿ ಬಳಗದ ಮಾತಿನಂತೆ ತಾವು ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿದ ತೃಪ್ತಿ ಇದೆ. ಕ್ರೀಡಾಂಗಣ, ಉದ್ಯಾನ, ರಸ್ತೆ, ಕುಡಿಯುವ ನೀರು, ವಸತಿ ನಿಲಯ, ವಸತಿ ಶಾಲೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಿರುವೆ. 2023ರಲ್ಲಿ ಮತ್ತೊಂದು ಬಾರಿ ಸ್ಪರ್ಧಿಸುತ್ತಿದ್ದು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ನಗೆಹಬ್ಬ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಗಳ ವೇದಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಉದ್ಘಾಟಿಸಿ ಮಾತನಾಡಿ, ‘ಐತಿಹಾಸಿಕ ಹಿನ್ನಲೆ, ಕುರುಹಗಳ ಮಧ್ಯೆ ಕರಡಕಲ್ಲ ಕೆರೆ ದಂಡೆಯಲ್ಲಿ ಹೈಟೆಕ್‍ ಉದ್ಯಾನ ನಿರ್ಮಾಣ ಖುಷಿ ತಂದಿದೆ. ಹೂಲಗೇರಿ ಮತ್ತು ತಾವು ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಶಾಸಕರು ಸಾರ್ವಜನಿಕರ ಆರೋಗ್ಯ ಮತ್ತು ಪಟ್ಟಣದ ಸೌಂದರ್ಯಕ್ಕೆ ಮಹಾನ್‍ ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಸಾಹಿತಿ ಮಂಜುನಾಥ ಕಾಮಿನ್‍, ಡಾ.ವಿಜಯಕುಮಾರ ಹೆಸರೂರು, ಸೈಯದ್‍ ಮುಫ್ತಿಸಾಬ ಮಾತನಾಡಿ, ‘ಕನಸಿನಲ್ಲೂ ಊಹಿಸದ ಉದ್ಯಾನ ಕಂಡಿದ್ದೇವೆ. ಸ್ವಚ್ಛತೆ ಜೊತೆ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮಗಳ ಮೇಲಿದೆ. ಪೂರ್ವಭಾವಿ ಸಭೆಯಲ್ಲಿ ಮಾತು ಕೊಟ್ಟಂತೆ ಶಾಸಕರ ಹೂಲಗೇರಿ ಅವರು ನಡೆದುಕೊಂಡಿದ್ದಾರೆ’ ಎಂದು ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ಉಪಾಧ್ಯಕ್ಷ ಎಂ.ಡಿ ರಫಿ. ಉದ್ಯಾನ ನಿರ್ಮಾಣದ ಗುತ್ತಿಗೆದಾರ ಅಮರಗುಂಡಪ್ಪ ಮೇಟಿ, ಜಿಲ್ಲಾ ಪಂಚಾಯತ್‍ ಎಂಜಿನಿಯರಿಂಗ್‍ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ, ಪುರಸಭೆ ಸದಸ್ಯರಾದ ಪ್ರಮೋದ ಕುಲಕರ್ಣಿ, ಬಾಬುರೆಡ್ಡಿ ಮುನ್ನೂರು, ರುದ್ರಪ್ಪ ಬ್ಯಾಗಿ, ದೊಡ್ಡನಗೌಡ ಹೊಸಮನಿ, ಶಿವರಾಯ ದೇಗುಲಮಡಿ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

ನಗೆಗಡಲಲ್ಲಿ ತೇಲಿದ ನಾಗರಿಕರು

ಸಾರ್ವಜನಿಕ ಉದ್ಯಾನ, ಪಶು ಆಸ್ಪತ್ರೆ, ಶಾಲಾ ಕೊಠಡಿಗಳ ಲೋಕಾರ್ಪಣೆ ನಂತರದಲ್ಲಿ ಆಯೋಜಿಸಿದ್ದ ಬಹಿರಂಗ ವೇದಿಕೆ ನಂತರದಲ್ಲಿ ಆಯೋಜಿಸಿದ್ದ ನಗೆ ಹಬ್ಬ ಕಾರ್ಯಕ್ರಮದಲ್ಲಿ ಪ್ರಾಣೇಶ ಕುಲಕರ್ಣಿ (ಬೀಚಿ), ನರಸಿಂಹ ಜೋಷಿ ಗಂಗಾವತಿ, ಬಸವರಾಜ ಮಹಾಮನಿ, ರಾಘವೇಂದ್ರಾಚಾರ್ಯ ರಾಯಚೂರು ಅವರ ಸಮಯೋಚಿತ, ವಾಸ್ತವ ಸಂಗತಿಗಳ ತಳಕು ಹಾಕುತ್ತ ನೆರೆದಿದ್ದ ಜನರನ್ನು ರಂಜಿಸುವ ಜೊತೆ ನಗೆ ಗಡಲಲ್ಲಿ ತೇಲಾಡುವಂತೆ ಮಾಡಿತ್ತು.

ಕಾಮಗಾರಿಗಳ ಉದ್ಘಾಟನೆ: ಪಟ್ಟಣದ ವಿವಿಧ ಇಲಾಖೆಗೆ ಸಂಬಂಧಿಸಿ ನಿರ್ಮಾಣಗೊಂಡ 2020-21 ಮತ್ತು 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಡಿ ಗೌಳಿಪುರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ₹ 52 ಲಕ್ಷದಲ್ಲಿ ನಿರ್ಮಿಸಿದ ನೂತನ ಶಾಲಾ ಕೊಠಡಿ ಹಾಗೂ 2021-22ನೇ ಸಾಲಿನ ರಾಷ್ಟ್ರೀಯ ಯೋಜನೆ ಅನುದಾನ₹ 42 ಲಕ್ಷದಲ್ಲಿ ನಿರ್ಮಿಸಿದ ಪಶು ಆಸ್ಪತ್ರೆ ಉದ್ಘಾಟಿಸಲಾಯಿತು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನ ₹ 7.43ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್‍ ಸಾರ್ವಜನಿಕ ಉದ್ಯಾನ ಹಾಗೂ ಎಟಿಎಲ್‍ ಟಿಂಕರಿಂಗ್‍ ಲ್ಯಾಬ್‍, ₹ 31ಲಕ್ಷದಲ್ಲಿ ನೂತನ ಶಾಲಾ ಕೊಠಡಿಗಳು, ₹ 35ಲಕ್ಷದಲ್ಲಿ ನಿರ್ಮಿಸಿದ ರಂಗಮಂದಿರ ಉದ್ಘಾಟನೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.