ಕವಿತಾಳ: ಮಸ್ಕಿ ತಾಲ್ಲೂಕಿನ ತುಪ್ಪದೂರು ಮತ್ತು ಲಿಂಗಸುಗೂರು ತಾಲ್ಲೂಕಿನ ಚಿಕ್ಕಹೆಸರೂರು ಗ್ರಾಮಗಳ ನಡುವೆ ಇರುವ ‘ಮೊದಲೂಟಿ’ ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ ಆಕರ್ಷಕ ತಾಣ.
ಸುತ್ತಮುತ್ತ ಗುಡ್ಡಗಳು, ನಡುವೆ ಹರಿಯುವ ನೀರಿನ ಜರಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಗಿಡ ಮರಗಳು, ಹಸಿರು ವಾತಾವರಣ ಮತ್ತು ಪಕ್ಷಿಗಳ ಕಲರವ ಕೇಳಿ ಬರುವ ಈ ಸ್ಥಳದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿದ ಆದಯ್ಯ ಮತ್ತು ಅಮರಯ್ಯ ದೇವಸ್ಥಾನಗಳು ಭಕ್ತಿಯ ಪ್ರತೀಕವಾಗಿವೆ.
ಕಡು ಬೇಸಿಗೆ, ಮಳೆ ಬಾರದೆ ಬರಗಾಲ ಬಿದ್ದರೂ ವರ್ಷದ 365 ದಿನಗಳೂ ಇಲ್ಲಿ ನೀರು ಹರಿಯುವ ಕಾರಣಕ್ಕೆ ‘ಮೊದಲೂಟಿ’ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.
ಬೃಹತ್ ಗಾತ್ರದ ಅರಳಿ ಮರ, ನೆಲಬೇವು, ಮಯೂರ ಶಖೆ, ಎದುರು ಉತ್ತರಾಣಿ, ಸುಗಂಧಿ ಬೇರು, ಅಂಕಲಗಿ ಗಿಡ ಸೇರಿದಂತೆ ಹಲವು ಸಸ್ಯಗಳು ಹುಲುಸಾಗಿ ಬೆಳೆದಿವೆ. ನಿರಂತರ ಹರಿಯುವ ನೀರಿನಲ್ಲಿ ಔಷಧೀಯ ಗುಣ ಇದೆ ಎನ್ನುತ್ತಾರೆ ಸ್ಥಳೀಯರು. ಈ ನೀರು ಸೇವನೆಯಿಂದ ಹಲವರು ಗಂಭೀರ ಕಾಯಿಲೆಗಳಿಂದ ಗುಣ ಹೊಂದಿದ್ದಾರೆ ಎನ್ನುವುದು ಗ್ರಾಮಸ್ಥರ ನಂಬಿಕೆ.
‘ಆದಯ್ಯ, ಅಮರಯ್ಯ ದೇವಸ್ಥಾನದಲ್ಲಿನ ಉದ್ಭವ ಲಿಂಗಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಸಾಧಕರು ಆಧ್ಯಾತ್ಮಿಕ ಸಾಧನೆಗೆ ಇಲ್ಲಿ ಬರುತ್ತಾರೆ’ ಎಂದು ಕಳೆದ 15 ವರ್ಷಗಳಿಂದ ಇಲ್ಲಿ ನೆಲೆಯೂರಿದ ಭೀರಪ್ಪಜ್ಜ ತಿಳಿಸಿದರು.
ಈ ಪ್ರದೇಶದಲ್ಲಿ ಈಚೆಗೆ ಸ್ಥಾಪಿಸಿದ ಪವನ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು 1 ಕಿ.ಮೀ. ಅಂತರದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸ್ಥಳೀಯರಲ್ಲಿ ಆಶಾಭಾವನೆ ಮೂಡಿದೆ.
‘ಈ ಪ್ರದೇಶದಲ್ಲಿ ಕಳೆದ ವರ್ಷ ಸಿಡಿಲು ಬಡಿದು ಹತ್ತಕ್ಕೂ ಹೆಚ್ಚು ಕುರಿ ಸತ್ತರೂ ಕುರಿ ಹಿಂಡಿನ ನಡುವೆ ನಿಂತಿದ್ದ ತಮ್ಮ ಸೊಸೆ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸ್ಥಳದ ಮಹಿಮೆ ದೊಡ್ಡದು’ ಎಂದು ರಾಯಪ್ಪ ಹೇಳಿದರು.
ಮಾರ್ಗಸೂಚಿ: ಮೊದಲೂಟಿಗೆ ತುಪ್ಪದೂರು ಗ್ರಾಮದ ಮೂಲಕ ಹೋಗುವುದಾದರೆ 1 ಕಿ.ಮೀ ಕಾಲ್ನಡಿಗೆ ಅನಿವಾರ್ಯ, ಚಿಕ್ಕಹೆಸರೂರು ಗ್ರಾಮದಿಂದ ಬೈಕ್, ಕಾರು ಮತ್ತಿತರ ವಾಹನ ಸಂಚರಿಸಲು ರಸ್ತೆ ಇದೆ.
ಭಕ್ತರ ಸಮಿತಿ ರಚಿಸಿ ದೇವಸ್ಥಾನ ಅಭಿವೃದ್ಧಿಗೆ ಯೋಜಿಸಿದ್ದು ಸರ್ಕಾರದ ನೆರವು ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ.ಬಸವರಾಜಪ್ಪಗೌಡ, ಹರ್ವಾಪುರ
ಏಳು ನಾಲೆಗಳ ನೀರು ಸತತ ಹರಿಯುವ ಈ ಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ 15 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು.ಗುರುಸಿದ್ದೇಶ ಮೇಟಿ, ಚಿಕ್ಕಹೆಸರೂರು
ಬೆಂಗಳೂರು ಮೂಲದ ಎಂಜಿನಿಯರ್ ಮುಸ್ಲಿಂ ಸಮಾಜದ ಮುಷರಫ್ ಅವರು 9 ವರ್ಷ ದಸರಾ ಸಂದರ್ಭದಲ್ಲಿ ಇಲ್ಲಿ ದೇವಿ ಪುರಾಣ ಪ್ರವಚನ ನಡೆಸಿದ್ದಾರೆಶಿವಕುಮಾರ ದಳಪತಿ, ತುಪ್ಪದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.