ADVERTISEMENT

ಮುಂದಿನ ಅವಧಿಗೆ ಮತ್ತೊಮ್ಮೆ ಮೋದಿ ಪ್ರಧಾನಿ: ಬಿಜೆಪಿ ಶಾಸಕ ಪಿ.ರಾಜೀವ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 15:25 IST
Last Updated 21 ಸೆಪ್ಟೆಂಬರ್ 2019, 15:25 IST
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ಜನಜಾಗೃತಿ ಸಭೆಯಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ ಮಾತನಾಡಿದರು
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ಜನಜಾಗೃತಿ ಸಭೆಯಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ ಮಾತನಾಡಿದರು   

ರಾಯಚೂರು: ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದಲ್ಲಿ ಸೇರಲು ನರೇಂದ್ರ ಮೋದಿ ಅವರನ್ನು ಮುಂದಿನ ಇನ್ನೊಂದು ಅವಧಿಗೆ ಪ್ರಧಾನಿ ಮಾಡಬೇಕಾದ ಅಗತ್ಯವಿದೆ ಎಂದು ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ ಹೇಳಿದರು.

ನಗರದ ಸಂತೋಷಿ ಹೋಂಟೆಲ್‌ ಸಭಾಂಗಣದಲ್ಲಿ ಬಿಜೆಪಿಯಿಂದ ರಾಷ್ಟ್ರೀಯ ಐಕ್ಯತಾ ಅಭಿಯಾನದ ನಿಮಿತ್ತ ಶನಿವಾರ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.

ಕಾಶ್ಮೀರದಲ್ಲಿ ಭಾರತದ ಪರವಾಗಿ ಘೋಷಣೆ ಕೂಗಿದರೆ ಸಾಕು ನೂರಾರು ಹೆಣಗಳು ಬೀಳುತ್ತಿದ್ದವು. ಆದರೆ, ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಮುಂಜಾಗ್ರತೆ ಕ್ರಮದಿಂದಾಗಿ ಸಂವಿಧಾನದ ಕಲಂ 370 ಮತ್ತು 35ಎ ರದ್ದು ಮಾಡಿದಾಗ ಒಂದು ಹೆಣವೂ ಬಿದ್ದಿಲ್ಲ ಎಂದರು.

ADVERTISEMENT

ದೇಶ ವಿರೋಧಿ ಚಟುವಟಿಕೆ ಮಾಡುವವರಿಗೆ ಟಿವಿ ನೋಡಲು, ಮೊಬೈಲ್ ಬಳಸಲು ಬಿಟ್ಟಿಲ್ಲ ಹಾಗೂ ಮಾನವ ಹಕ್ಕುಗಳು ಉಲ್ಲಂಘನೆ ಆಗಿವೆ ಎಂಬ ಟೀಕೆ ಮಾಡುವ ವಿರೋಧ ಪಕ್ಷಗಳ ನಾಯಕರು, 41 ಸಾವಿರ ಜನರ ಮಾರಣಹೋಮ ನಡೆದಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನೆ ಮಾಡಿದರು.

ದೇಶ ವಿರೋಧಿ ಚಟುವಟಿಕೆ ಮಾಡುವವರನ್ನು ಗೃಹ ಬಂಧನದಲ್ಲಿ ಇಟ್ಟರೆ ಸಾಲದು, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಂದಾಗ ಮಾತ್ರ ದೇಶದ ಜನರು ನೆಮ್ಮದಿಯಿಂದ ಜೀವಿಸುತ್ತಾರೆ. ದೇಶದ ಅಭಿವೃದ್ಧಿಗೆ ಅಡ್ಡಿ ತೊಲಗಲಿದೆ ಎಂದರು.

ನರೇಂದ್ರ ಮೋದಿ ಪ್ರಧಾನಮಂತ್ರಿ ಆಗುವವರೆಗೆ ಕಾಶ್ಮೀರದಲ್ಲಿ ಸೈನಿಕರಿಗೆ ಗುಂಡು ಹಾರಿಸುವ ಅಧಿಕಾರವೇ ಇರಲಿಲ್ಲ. ಆದರೆ, ಕಲಂ 370 ಲಾಭ ಪಡೆದ ಮುಫ್ತಿ ಮತ್ತು ಅಬ್ದುಲ್ಲಾ ಕುಟುಂಬದವರು ಸೈನಿಕರ ಮೇಲೆ ಕಲ್ಲು ಎಸೆಯಲು ಜನರಿಗೆ ಹಣ ನೀಡುತ್ತಿದ್ದರು. ಅವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದರು. ಕಾಶ್ಮೀರದ ವಿಷಯ ದೇಶಕ್ಕೆ ಕಿರಿಕಿರಿ ಆಗಿತ್ತು. ಕಲಂ 370ಗೆ ಡಾ. ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದ್ದರಿಂದಲೇ ಅದನ್ನು ತಾತ್ಕಾಲಿಕವೆಂದು ಸಂವಿಧಾನದಲ್ಲಿ ಉಲ್ಲೇಖಿಸಿದ್ದರು. ಈ ಅಸ್ತ್ರ ಉಪಯೋಗಿಸಿಕೊಂಡ ನರೇಂದ್ರ ಮೋದಿ ಅವರು ಕಾಶ್ಮೀರವನ್ನು ಭಾರತದಲ್ಲಿ ವಿಲೀನ ಮಾಡಿದರು ಎಂದು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಜಮ್ಮು ಕಾಶ್ಮೀರಕ್ಕೆ ಕಲಂ 370 ತಾತ್ಕಾಲಿಕವಾಗಿದ್ದರೂ, ಅಂದಿನ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್ ನೆಹರು ಅವರು ಕಲಂ ತೆಗೆಯಲು ನಿರಾಕರಣೆ ಮಾಡಿದ್ದರು ಎಂದು ಆರೋಪಿಸಿದರು.

ಯಾವುದೇ ಸಾವು–ನೋವು, ಗಲಭೆ ಹಾಗೂ ರಕ್ತಕ್ರಾಂತಿಯಾಗದಂತೆ ಕಾಶ್ಮೀರಕ್ಕಿದ್ದ ವಿಶೇಷ ಕಲಂ ತೆಗೆದು ಹಾಕಿದ ನರೇಂದ್ರಮೋದಿ ಹಾಗೂ ಅಮಿತ್ ಶಾ ಅವರು ದೇಶದೆಲ್ಲೆಡೆ ಉದ್ಯಮ ಸ್ಥಾಪಿಸಲು ಹಾಗೂ ಆಸ್ತಿ ಖರೀದಿಸಲು ಇರುವಂತಹ ಅವಕಾಶವನ್ನು ಕಾಶ್ಮೀರದಲ್ಲೂ ಮಾಡಿಕೊಟ್ಟಿದ್ದಾರೆ. ಕೆಲವೇ ದಿನದಲ್ಲಿ ರಕ್ತದ ಕಲೆ ಕಳೆದುಕೊಳ್ಳಲಿರುವ ಕಾಶ್ಮೀರವು ಮತ್ತೆ ಪ್ರವಾಸಿಗರ ಮೂಲ ಸ್ವರ್ಗವಾಗಲಿದೆ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಜೆ.ಶರಣಪ್ಪಗೌಡ, ಮುಖಂಡರಾದ ಎನ್.ಶಂಕರಪ್ಪ, ಎ.ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ್, ಆರ್.ತಿಮ್ಮಯ್ಯ, ದೊಡ್ಡ ಮಲ್ಲೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.