ADVERTISEMENT

ಮುದಗಲ್ | ಖರೀದಿ ಕೇಂದ್ರದಲ್ಲಿ ಸೌಲಭ್ಯ ಕೊರತೆ: ಪರದಾಟ

ಸಿಸಿಟಿವಿ ಕ್ಯಾಮೆರಾ ಇಲ್ಲ, ಅಧಿಕೃತ ರಸೀದಿ ನೀಡುವುದಿಲ್ಲ

ಡಾ.ಶರಣಪ್ಪ ಆನೆಹೊಸೂರು
Published 19 ಏಪ್ರಿಲ್ 2025, 5:07 IST
Last Updated 19 ಏಪ್ರಿಲ್ 2025, 5:07 IST
ಮುದಗಲ್ ಎಪಿಎಂಸಿಯಲ್ಲಿರುವ ತೊಗರಿ ಖರೀದಿ ಕೇಂದ್ರದ ಮುಂದೆ ತೊಗರಿ ಧಾನ್ಯಗಳನ್ನು ತುಂಬಿಕೊಂಡು ನಿಂತ ವಾಹನಗಳು
ಮುದಗಲ್ ಎಪಿಎಂಸಿಯಲ್ಲಿರುವ ತೊಗರಿ ಖರೀದಿ ಕೇಂದ್ರದ ಮುಂದೆ ತೊಗರಿ ಧಾನ್ಯಗಳನ್ನು ತುಂಬಿಕೊಂಡು ನಿಂತ ವಾಹನಗಳು   

ಮುದಗಲ್: ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್‍ಪಿ) ಅಡಿಯಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭವಾದ ತೊಗರಿ ಕೇಂದ್ರದಲ್ಲಿ ಸೌಲಭ್ಯದ ಕೊರತೆಯಿಂದಾಗಿ ರೈತರು ತಮ್ಮ ಧಾನ್ಯ ಮಾರಾಟ ಮಾಡಲು ಪರದಾಡುತ್ತಿದ್ದಾರೆ.

ಪಟ್ಟಣದ ಸುತ್ತಲಿನ ಪ್ರದೇಶದಲ್ಲಿ ತೊಗರಿ ಬೆಳೆದ ರೈತರು ತಮ್ಮ ಧಾನ್ಯ ಮಾರಾಟ ಮಾಡಲು ಎಪಿಎಂಸಿ ಯಲ್ಲಿರುವ ಖರೀದಿ ಕೇಂದ್ರಕ್ಕೆ ಹೋದರೆ, ಮಾರಾಟ ಮಾಡಲು ಮೂರು ದಿನಗಳಿಂದ ಪರದಾಡುತ್ತಿದ್ದಾರೆ. ರೈತ ತಮ್ಮ ಧಾನ್ಯಗಳನ್ನು ವಾಹನಗಳಲ್ಲಿ ತುಂಬಿಕೊಂಡು ನಿಂತಿದ್ದಾರೆ. ಕಳ್ಳರ ಹಾವಳಿಯಿಂದಾಗಿ ಹಗಲಿರುಳು ಧಾನ್ಯಗಳನ್ನು ಕಾಯಿಯುವಂತಾಗಿದೆ. ಆದೇಶದಂತೆ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ.

ತೊಗರಿಗೆ ಖರೀದಿಗೆ ನೀಡಿರುವ ಸಮಯದಲ್ಲಿ ಸರಿಯಾಗಿ ಅಧಿಕಾರಿಗಳು ನಿಗಾವಹಿಸುತ್ತಿಲ್ಲ. ದಾಸ್ತಾನುಗಳು ಹೆಚ್ಚಲು ಹೆಚ್ಚಿನ ಕೊಠಡಿಗಳ ವ್ಯವಸ್ಥೆಇಲ್ಲ. ಸಮರ್ಪಕ ಭದ್ರತೆ ವವಸ್ಥೆ ಇಲ್ಲ. ಇದ್ದ ಕೊಠಡಿಗಳಿಗೆ ಸಮರ್ಪಕವಾಗಿ ಲಾಕರ್ ವ್ಯವಸ್ಥೆ ಇಲ್ಲ. ರೈತರು ಕೇಂದ್ರದ ಕಾರ್ಯದರ್ಶಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ರೈತ ವಿನೋದ ಕುಮಾರ ಆರೋಪಿಸಿದರು.

ADVERTISEMENT

ಮಾರುಕಟ್ಟೆಯಲ್ಲಿ ಸದ್ಯ ತೊಗರಿ ಸರಾಸರಿ ದರ ₹7,000ದಿಂದ 7,100ವರೆಗೆ ಇದೆ. ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಡಿ ಕ್ವಿಂಟಲ್‍ಗೆ ₹8 ಸಾವಿರ ಬೆಲೆ ನಿಗದಿಪಡಿಸಲಾಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ 12 ಖರೀದಿ ಕೇಂದ್ರಗಳಿದ್ದು, ಮುದಗಲ್ ಹೋಬಳಿಯಲ್ಲಿ ಮುದಗಲ್, ಬಯ್ಯಾಪುರ, ಮಾಕಾಪುರ, ನಾಗಲಾಪುರ, ಆಮದಿಹಾಳದಲ್ಲಿ ತೊಗರಿ ಖರೀದಿ ಕೇಂದ್ರಗಳಿವೆ.

‘ಸಾಲ ಮಾಡಿ ತೊಗರಿ ಕೃಷಿ ಮಾಡಿದ್ದೇವೆ. ಬೆಳೆ ಮಾರಿ, ಮಾಡಿದ ಸಾಲ ತೀರಿಸುವ ಜೊತೆಗೆ, ಮುಂದಿನ ಕೃಷಿ ಚಟುವಟಿಕೆಗೆ ತಯಾರಿ ನಡೆಸಬೇಕು. ಖರೀದಿ ಕೇಂದ್ರದಲ್ಲಿ ಮಾರಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದರಿಂದಾಗಿ ತೊಂದರೆಯಾಗುತ್ತಿದೆ’ ಎಂದು ಕೃಷಿಕ ಹನುಮಂತ ಹೇಳಿದರು.

ಎಪಿಎಂಸಿ ವರ್ತಕರಿಗೆ ನೀಡಿದರೆ ಕೆಲ ವರ್ತಕರು, ರೈತರಿಂದ ದವಸಧಾನ್ಯಗಳ ಖರೀದಿ ಮಾಡಿ, ಅಧಿಕೃತ ರಸೀದಿ ನೀಡುವುದಿಲ್ಲ. ಬಿಳಿಯ ಹಾಳೆಯಲ್ಲಿ ವಹಿವಾಟಿನ ಲೆಕ್ಕ ನೀಡುತ್ತಾರೆ. ಒಂದೆಡೆ ರೈತರನ್ನು ಶೋಷಣೆ ಮಾಡಿದರೆ ಮತ್ತೊಂದೆಡೆ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಾರೆ. ಈ ಕೃತ್ಯ ಬಹಿರಂಗವಾಗಿ ನಡೆಯುತ್ತಿದ್ದರೂ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎನ್ನುತ್ತಾರೆ ರೈತರು

ಎಪಿಎಂಸಿಯಲ್ಲಿ ವ್ಯಾಪಾರಿಗಳಿಗೆ, ಗ್ರಾಹಕರಿಗೆ, ಹಮಾಲಿಗಳು ಸೇರಿದಂತೆ ಕೂಲಿ ಕಾರ್ಮಿಕರಿಗೆ ಸಮರ್ಪಕವಾದ ಸೌಲಭ್ಯಗಳಿಲ್ಲ. ಕೊರತೆಗಳ ಪ್ರಶ್ನೆಗಳು ಎದುರಾಗುತ್ತವೆ. ರೈತರಿಗೆ ರೈತಭವನ ಅಥವಾ ವಿಶ್ರಾಂತಿ ಕೊಠಡಿ ಇದ್ದರೂ ಇಲ್ಲದಂತಾಗಿದೆ. ಸಮರ್ಪಕವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರೈತರಿಗೆ ಮತ್ತು ಕಾರ್ಮಿಕರಿಗೆ ಕ್ಯಾಂಟಿನ್ ವ್ಯವಸ್ಥೆಯಿಲ್ಲ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟಿನ್ ಇನ್ನೂ ಉದ್ಘಾಟನೆಗೊಂಡಿಲ್ಲ ಎನ್ನುತ್ತಾರೆ ರೈತರಾದ ರವಿ, ಹುಲಗಪ್ಪ, ಆದಪ್ಪ.

ಸರ್ಕಾರ ಖಾಲಿ ಚೀಲ ನೀಡುತ್ತಿಲ್ಲ. ಇದರಿಂದಾಗಿ ತೊಗರಿ ಖರೀದಿ ಮಾಡುತ್ತಿಲ್ಲ. ಚೀಲ ಬಂದ ನಂತರ ಖರೀದಿ ಮಾಡುತ್ತೇವೆ.
ಶೇಖರಪ್ಪ ಮಟ್ಟೂರು ಕಾರ್ಯದರ್ಶಿ ತೊಗರಿ ಖರೀದಿ ಕೇಂದ್ರ ಮದಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.