ADVERTISEMENT

ಲಿಂಗಸುಗೂರು | ಮುಸ್ಲಿಮರಿಲ್ಲದ ಗ್ರಾಮಗಳಲ್ಲಿ ಮೊಹರಂ ಸಂಭ್ರಮ

ಜಾತಿ-ಧರ್ಮ ರಹಿತ ಸಮಾಜಕ್ಕೆ ಸಾಕ್ಷಿಯಾದ ಕುಪ್ಪಿಗುಡ್ಡ, ಹಾಲಭಾವಿ, ಜಲದುರ್ಗ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 6:58 IST
Last Updated 16 ಜುಲೈ 2024, 6:58 IST
ಲಿಂಗಸುಗೂರು ತಾಲ್ಲೂಕು ಕುಪ್ಪಿಗುಡ್ಡ ಗ್ರಾಮದಲ್ಲಿ ಹಿಂದುಗಳೇ ಮೊಹರಂ ಹಬ್ಬದ ನಿಮಿತ್ತ ಅಲಾಯಿ ದೇವರು ಸ್ಥಾಪನೆ ಮಾಡಿರುವುದು
ಲಿಂಗಸುಗೂರು ತಾಲ್ಲೂಕು ಕುಪ್ಪಿಗುಡ್ಡ ಗ್ರಾಮದಲ್ಲಿ ಹಿಂದುಗಳೇ ಮೊಹರಂ ಹಬ್ಬದ ನಿಮಿತ್ತ ಅಲಾಯಿ ದೇವರು ಸ್ಥಾಪನೆ ಮಾಡಿರುವುದು   

ಲಿಂಗಸುಗೂರು: ಮೊಹರಂ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು ಆದರೆ, ತಾಲ್ಲೂಕಿನಲ್ಲಿ ಮುಸ್ಲಿಂ ಕುಟುಂಬಸ್ಥರೇ ಇಲ್ಲದ ಕುಪ್ಪಿಗುಡ್ಡ, ಹಾಲಭಾವಿ, ಜಲದುರ್ಗ ಸೇರಿದಂತೆ ಕೆಲವೆಡೆ ಹಿಂದೂಗಳೇ ಮೊಹರಂ ಆಚರಣೆ ಮಾಡುತ್ತಿದ್ದಾರೆ. ಇದು ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ನೂರಕ್ಕೆ ನೂರಷ್ಟು ಹಿಂದುಗಳೇ ವಾಸಿಸುವ ಕುಪ್ಪಿಗುಡ್ಡ, ಹಾಲಭಾವಿ, ಜಲದುರ್ಗ ಗ್ರಾಮಗಳ ಜನರು ದರ್ಗಾ ನಿರ್ಮಿಸಿ ಮೊಹರಂ ಆಚರಣೆಗೆ ಬೇಕಾಗುವ ಅಲಾಯಿ ದೇವರುಗಳನ್ನು ಸಿದ್ಧಪಡಿಸುತ್ತಾರೆ. ಕುರಾನ್‍ ಶ್ಲೋಕ್ ಪಠಣ ಮಾಡುವುದಕ್ಕೆ ಮಾತ್ರ ಅಕ್ಕಪಕ್ದ ಗ್ರಾಮದ ಮುಸ್ಲಿಂ ಕುಟುಂಬಸ್ಥರನ್ನು ಆಹ್ವಾನಿಸುತ್ತಾರೆ. ದೇವರು ಹಿಡಿಯುವುದು, ದಟ್ಟೆ ಉಡಿಸುವ ಇತರೆ ಧಾರ್ಮಿಕ ಕಾರ್ಯಗಳನ್ನೂ ಹಿಂದುಗಳೇ ಆಚರಣೆ ಮಾಡುತ್ತ ಬಂದಿದ್ದಾರೆ.

ಅಮಾವಾಸ್ಯೆ ಆದ ತಕ್ಷಣ ಚಂದ್ರ ಕಾಣಿಸುತ್ತಿದ್ದಂತೆ ಗ್ರಾಮಸ್ಥರು ಅಲಾಯಿ ಕುಣಿ ಅಗೆದು, ಮಸೀದಿ(ದರ್ಗಾ) ಗಳಲ್ಲಿ ಇರುವ ಅಲಾಯಿ ದೇವರುಗಳ ಮೂರ್ತಿಗಳನ್ನು ಪೂಜೆ ಮಾಡುತ್ತಾರೆ. ಮೊಹರಂಗೆ ನೇಮಕಗೊಂಡ ಮುಸ್ಲಿಂ ಮೌಲ್ವಿ ಬಾರದೇ ಹೋದರೂ ಸಾಂಪ್ರದಾಯಿಕ ಆಚರಣೆಗಳನ್ನು ಚಾಚೂ ತಪ್ಪದೇ ಮಾಡುವುದು ಈ ಗ್ರಾಮಗಳ ವಿಶೇಷ.

ADVERTISEMENT

ಕುಪ್ಪಿಗುಡ್ಡದಲ್ಲಿ ಭೀಮರಾಯ ನೆಲೊಗಿ, ದೇವಪ್ಪ ಮಾನಮಟ್ಟಿ, ಸಾಬಣ್ಣ ಕುರಗೋಡ, ಆದಪ್ಪ ಮುದಗಲ್ಲ ಸೇರಿದಂತೆ ಉಪ್ಪಾರ ಸಮುದಾಯದವರೇ ದೇವರು ಹೊರುವುದು ಪದ್ಧತಿ. ಹಾಲಭಾವಿಯಲ್ಲಿ ಗಿಡ್ಡಪ್ಪ ಒಂಟಿ, ಸಿದ್ಧಪ್ಪ ಮುಂಡರಗಿ, ಆದಪ್ಪ ಚಿಗರಿ, ನಾಗಪ್ಪ ಮಿಂಚೇರಿ, ಹನುಮಪ್ಪ ಪೂಜಾರಿ, ನಾಗರಾಜ ಹಾಲಭಾವಿ ಕುಟುಂಬಸ್ಥರು ಅಂದರೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಾಲುಮತದವರು ದೇವರು ಹೊರುವು ಪದ್ಧತಿ ಅನುಸರಿಸುತ್ತಾರೆ.

ಹಾಲಭಾವಿ ಗ್ರಾಮದ ರವಿಗೌಡ ಪಾಟೀಲ, ಕುಪ್ಪಿಗುಡ್ದದ ಮಾಧವ ನೆಲೊಗಿ ಮಾತನಾಡಿ, ‘ಮೊಹರಂ ಆಚರಣೆ ಸಂದರ್ಭದಲ್ಲಿ ಅನ್ಯ ಗ್ರಾಮಗಳಿಂದ ಮುಜಾವರ ಕುಟುಂಬಸ್ಥರು ಮಾತ್ರ ಬರುತ್ತಾರೆ. ಉಳಿದಂತೆ ಮೊಹರಂ ಆಚರಣೆ ಗ್ರಾಮಗಳಲ್ಲಿನ ಎಲ್ಲ ಧರ್ಮ, ಜಾತಿಯವರು ಒಗ್ಗಟ್ಟಿಂದ ಮಾಡಿಕೊಂಡು ಬಂದಿದ್ದೇವೆ. ಕುಪ್ಪಿಗುಡ್ಡ, ಹಾಲಭಾವಿ, ಜಲದುರ್ಗ ಮೊದಲಿನಿಂದ ಹೆಸರಾಗಿವೆ. ಬೇರೆ ಗ್ರಾಮಗಳಲ್ಲಿನ ಮಾಹಿತಿ ತಮಗಿಲ್ಲ’ ಎಂದರು.

ಲಿಂಗಸುಗೂರು ತಾಲ್ಲೂಕು ಹಾಲಭಾವಿ ಗ್ರಾಮದಲ್ಲಿ ಹಿಂದುಗಳೆ ಮೊಹರಂ ಹಬ್ಬದ ನಿಮಿತ್ತ ಅಲಾಯಿ ದೇವರು ಸ್ಥಾಪನೆ ಮಾಡಿರುವುದು
ಕಾಶಿಂಸಾಬ ಯರಗುಂಟಿ
ಸೈಯದ್‍ ಜಿಲಾನಿ ಸರ್ಜಾಫುರ

ಧರ್ಮ, ಜಾತಿ ರಹಿತ ಆಚರಣೆಗಳ ಅನಾವರಣ ಶತಮಾನಗಳ ಹಿಂದಿನಿಂದ ಭಾವೈಕ್ಯತೆ ಸಂದೇಶ ಭಾತೃತ್ವ, ಸಹೋದರತ್ವ ಸಾಕ್ಷಿಕರಿಸಿದ ಮೊಹರಂ

ಸರ್ಜಾಪುರ ಮುಜಾವರ ಕುಟುಂಬಸ್ಥರು ಕೆಲ ವರ್ಷಗಳಿಂದ ಗ್ರಾಮಸ್ಥರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಮೊಹರಂ ಸೇರಿದಂತೆ ನೀಡಿದಷ್ಟು ಕಾಣಿಕೆ ಪಡೆದು ಇತರೆ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತ ಬಂದಿರುವೆ -ಸೈಯದ್‍ ಜಿಲಾನಿ ಸರ್ಜಾಪುರ ಮುಜಾವರ್‍ ಕುಪ್ಪಿಗುಡ್ಡ

ಯರಗುಂಟಿ ಮುಜಾವರ ಕುಟುಂಬಸ್ಥರು ಹಿರಿಯರ ಕಾಲದಿಂದ ಹಾಲಭಾವಿ ಗ್ರಾಮಸ್ಥರ ಪ್ರೀತಿ ವಿಶ್ವಾಸ ಗಳಿಸಿಕೊಂಡು ನೀಡಿದಷ್ಟು ಕಾಣಿಕೆ ಪಡೆದು ಪ್ರತಿಯೊಂದು ಹಬ್ಬಗಳಲ್ಲಿ ಭಾಗವಹಿಸುತ್ತ ಬಂದಿದ್ದೇವೆ -ಕಾಶಿಂಸಾಬ ಯರಗುಂಟಿ ಮುಜಾವರ್ ಹಾಲಭಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.