ADVERTISEMENT

ಮಸ್ಕಿ: ಪುರಸಭೆ ಚುನಾವಣೆ- ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ, ಸಂಸದ, ಶಾಸಕರು ಭಾಗಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 12:32 IST
Last Updated 22 ಡಿಸೆಂಬರ್ 2021, 12:32 IST
ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿಯ ವಾರ್ಡ್ 1ರಲ್ಲಿ ಬಿಜೆಪಿ ಅಭ್ಯರ್ಥಿ ಲಲಿತಾ ಪ್ರಕಾಶ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು
ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿಯ ವಾರ್ಡ್ 1ರಲ್ಲಿ ಬಿಜೆಪಿ ಅಭ್ಯರ್ಥಿ ಲಲಿತಾ ಪ್ರಕಾಶ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು   

ಮಸ್ಕಿ: ಡಿ. 27 ರಂದು ನಡೆಯುವ ಪುರಸಭೆ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮಂಗಳವಾರ ಬಿಜೆಪಿ ಪರವಾಗಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಕಾಂಗ್ರೆಸ್ ಪರವಾಗಿ ಶಾಸಕ ಆರ್.ಬಸನಗೌಡ ಸೇರಿದಂತೆ ಅನೇಕ ಮುಖಂಡರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಬಿಜೆಪಿ ಅಧಿಕಾರ ಖಚಿತ: ಮಸ್ಕಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಪಟ್ಟಣದ 1ನೇ ವಾರ್ಡಿನಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಲಿಲಿತಾ ಪ್ರಕಾಶ ಪರವಾಗಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ADVERTISEMENT

‘ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಇಡೀ ವಿಶ್ವವೇ ಅವರನ್ನು ಮೆಚ್ಚಿಕೊಂಡಿದೆ. ದೇಶದಲ್ಲಿ ಐಕ್ಯತೆ ಹಾಗೂ ಭದ್ರತೆ ದೃಷ್ಟಿಯಿಂದ ಬಿಜೆಪಿ ಅಧಿಕಾರದಲ್ಲಿರಬೇಕು ಅಲ್ಲದೇ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಪರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆಗಳು ಮಸ್ಕಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರಿಯಾಗಿದೆ’ ಎಂದರು.

ಲಲಿತಾ ಪ್ರಕಾಶ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಡಾ, ಬಿ.ಎಚ್, ದಿವಟರ್, ಬಸನಗೌಡ ಪೊಲೀಸ್ ಪಾಟೀಲ್, ಉಮಕಾಂತಪ್ಪ ಸಜ್ಜನ್ ದೊಡ್ಡಪ್ಪ ಕಡಬೂರು, ಎಂ. ಪ್ರಭುದೇವ್, ನಿವೃತ್ತ ಶಿಕ್ಷಕ ಯಲ್ಲಪ್ಪ ಜಾಲಿಹಾಳ, ಬಿಜೆಪಿ ಎಸ್ಸಿ ಮೊರ್ಚದ ಜಿಲ್ಲಾ ಘಟಕದ ಅದ್ಯಕ್ಷ ಶರಣಬಸವವಕೀಲ್, ಪುರಸಭೆ ಮಾಜಿ ಸದಸ್ಯರಾದ ಕಿರಣ್ ಸಾನಬಾಳ, ಅಭಿಜಿತ್ ಪಾಟೀಲ್, ಮಲ್ಲಿಕಾರ್ಜುನ ಬೈಲಗುಡ್ಡ, ಅಭ್ಯರ್ಥಿ ಲಲಿತಾ ಪ್ರಕಾಶ ಸೇರಿದಂತೆ ಇತರರು ಇದ್ದರು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮಂಡಲ ಅದ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಅನೇಕ ಮುಖಂಡರು ಚುನಾವಣೆ ಪ್ರಚಾರ ನಡೆಸಿದರು.

ಬಿಜೆಪಿಗೆ ಪಾಠ ಕಲಿಸಿ: ‘ಮಸ್ಕಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿ’ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಕರೆ ನೀಡಿದರು.

ಪಟ್ಟಣದ ಗಾಂಧಿ ನಗರದ ವಿವಿಧ ವಾರ್ಡ್‌ಗಳಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಅಧಿಕಾರ ಹಿಡಿಯುವುದು ಖಚಿತವಾಗಿದೆ. ಆ ಕಾರಣಕ್ಕೆ ಬಿಜೆಪಿ ಅವರು ಅಭ್ಯರ್ಥಿಗಳನ್ನು ಖರೀದಿ ಮಾಡಲು ಹೋರಟಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿಯವರ ದಬ್ಬಾಳಿಕೆಗೆ ಕಾರ್ಯಕರ್ತರು ಅಂಜಬೇಕಾಗಿಲ್ಲ. ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿದರು.

ಮುಖಂಡ ಶ್ರೀಶೈಲಪ್ಪ ಬ್ಯಾಳಿ, ಎಚ್.ಬಿ.ಮುರಾರಿ, ಮಹಾಂತೇಶ ಹೂವಿನಭಾವಿ, ವೆಂಕಟರೆಡ್ಡಿ, ಅಭ್ಯರ್ಥಿಗಳಾದ ನರಸಪ್ಪ ಭಜಂತ್ರ, ದೇವಮ್ಮ ಸೇರಿದಂತೆ ಅನೇಕ ಮುಖಂಡರು, ಪಕ್ಷದ ಪದಾಧಿಕಾರಿಗಳು ಇದ್ದರು.

ಗಾಂಧಿ ನಗರದ 22, 23 ವಾರ್ಡ್ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿ ಶಾಸಕ ಆರ್.ಬಸನಗೌಡ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.