ADVERTISEMENT

ಮುರುಘಾ ಶರಣರಿಂದ ದಾರಿ ತಪ್ಪಿಸುವ ಕಾರ್ಯ: ಬಸವಕೇಂದ್ರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 13:30 IST
Last Updated 10 ಆಗಸ್ಟ್ 2021, 13:30 IST
ಮುರುಘಾಶರಣರು, ಪ್ರಜಾವಾಣಿ ಚಿತ್ರ
ಮುರುಘಾಶರಣರು, ಪ್ರಜಾವಾಣಿ ಚಿತ್ರ   

ರಾಯಚೂರು: ‘ಮೌಢ್ಯತೆ ಆಚರಣೆಗಳನ್ನು ವಿರೋಧಿಸಿದ್ದ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಶರಣರು, ಪ್ರತಿಷ್ಠೆಗಾಗಿ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ’ ಎಂದು ರಾಯಚೂರುಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಧರ್ಮ ಸ್ಥಾಪನೆ ಬೇಡಿಕೆಗೆ ನೇತೃತ್ವದ ವಹಿಸಿದ್ದ ಮುರುಘಾ ಶರಣರು ‘ವೀರಶೈವ ಲಿಂಗಾಯತ’ ವೆಬ್‌ಸೈಟ್‌ ಪ್ರಾರಂಭಿಸುವ ಮೂಲಕ ಗೊಂದಲವನ್ನು ಹುಟ್ಟುಹಾಕಿದ್ದಾರೆ. ವೀರಶೈವ, ಲಿಂಗಾಯತರು ಒಂದೇ ಆಗಿದ್ದರೆ ಧರ್ಮಗುರುಗಳು ಮತ್ತು ಧರ್ಮಗ್ರಂಥ ಒಂದೇ ಆಗಿರಬೇಕಾಗುತ್ತದೆ’ಎಂದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕೊನೆಯಾಗಿಲ್ಲ. ಕಾನೂನಾತ್ಮಕ ಹೋರಾಟ ಮುಂದುವರಿದಿದೆ. ಲಿಂಗಾಯತ ಧರ್ಮೀಯರನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗುವವರು, ತಾತ್ವಿಕ ಚಿಂತನೆಗಳಿಂದ ದೂರಹೋದಂತೆ. ಮುರುಘಾ ಶರಣರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ಎಂದು ಒತ್ತಾಯಿಸಿದರು.

ADVERTISEMENT

‘ಬಸವಧರ್ಮದ ಮಾನವೀಯ ಮೌಲ್ಯಗಳು ಮತ್ತು ವೈಚಾರಿಕ ತಳಹದಿಯ ಮೇಲೆ ನಿಂತಿರುವ ಚಿತ್ರದುರ್ಗದ ಶ್ರೀಗಳು, ಸುಮಾರು 850 ಬಸವಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಶರಣ ಸಂಸ್ಕೃತಿ, ಉತ್ಸವ, ಶರಣಮೇಳ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವತತ್ವ ಪ್ರಚಾರ ಮಾಡುವುದರೊಂದಿಗೆ ಶರಣರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತರಿಸುವತ್ತ ಮೌಢ್ಯತೆಯನ್ನು ಅಳಿಸಿ ಭಕ್ತರ ಪ್ರೀತಿ ವಿಶ್ವಾಸಕ್ಕೆ ಕಾರಣರಾಗಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಮುಂದಾಳತ್ವ ವಹಿಸಿ ವೀರಶೈವ ಎನ್ನುವುದು ಒಂದು ಪಂಗಡ ಎಂದು ಹೇಳಿ, ಅದರಲ್ಲಿಯ ವೈದಿಕ ಮೌಡ್ಯಾಚರಣೆಗಳನ್ನು ಖಂಡಿಸುತ್ತ ಬಂದಿದ್ದಾರೆ. ಆದರೆ ವೆಬ್‌ಸೈಟ್‌ ಆರಂಭಿಸಿರುವುದು ಗೊಂದಲ ಮೂಡಿಸಿದೆ’ಎಂದು ತಿಳಿಸಿದರು.

ಶ್ರೀಬಸವರಾಜ ದೇವರು, ರಾಚನಗೌಡ ಕೋಳೂರು, ಚುಕ್ಕಿ ಸೂಗಪ್ಪ, ಡಾ.ಬಸವಪ್ರಭೂ ಬೆಟ್ಟದೂರು, ಚನ್ನಬಸವಣ್ಣ ಮಹಾಜನಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.