ಮಸ್ಕಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಟ್ಟಣದಲ್ಲಿ ಕೈಗೊಂಡಿರುವ ₹42 ಕೋಟಿ ವೆಚ್ಚದ ಅಮೃತ ಯೋಜನೆ 2.0 ಕಾಮಗಾರಿ ಆರಂಭದಲ್ಲಿಯೇ ಕುಂಟುತ್ತ ಸಾಗಿದೆ
ಕಾಮಗಾರಿಗೆ ಪೂಜೆ ಸಲ್ಲಿಸಿದ ವಾರದಲ್ಲಿಯೇ ಪೈಪ್ ಅಳವಡಿಸುವ ಕಾರ್ಯ ಆರಂಭಿಸಲಾಗಿತ್ತು. ಬಸವೇಶ್ವರ ನಗರದ ಮಾಳ್ಗಿ ಲೇಔಟನಲ್ಲಿ ಪೈಪ್‌ಲೈನ್ ಕಾಮಗಾರಿಗೆ ಭೂಮಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು ಬಸವೇಶ್ವರ ನಗರದ ಮತ್ತೊಂದು ರಸ್ತೆಯಲ್ಲಿ 200 ಮೀಟರ್ ಹಾಗೂ ಶಾಸಕರ ಸರ್ಕಾರಿ ಕಚೇರಿ ಮುಂದೆ ಪೈಪ್ ಅಳವಡಿಸಲು ಭೂಮಿ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಸ್ಥಳೀಯ ನಿವಾಸಿಗಳು ತಿರುಗಾಡಲು ಆಗದಂತೆ ಪರಿಸ್ಥಿತಿ ಉಂಟಾಗಿದೆ.
ತಮ್ಮ ವಾಹನಗಳನ್ನು ದೂರದಲ್ಲಿಯೇ ಬಿಟ್ಟು ಅಗೆದ ರಸ್ತೆಯಲ್ಲಿ ಜೀವ ಭಯದಲ್ಲಿ ಮನೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು ಹಾಗೂ ಮಹಿಳೆಯರು ಸಂಕಷ್ಟದಲ್ಲಿ ರಸ್ತೆ ದಾಟಬೇಕಾದ ಸ್ಥಿತಿ ಬಂದಿದೆ.
ಗುತ್ತಿಗೆದಾರರ ನಿರ್ಲಕ್ಷ್ಯವೇ ಅವೈಜ್ಞಾನಿಕ ಕಾಮಗಾರಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಶಾಸಕರು ಹಾಗೂ ಪುರಸಭೆ ಆಡಳಿತ ಮಂಡಳಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.