
ಮಾನ್ವಿ: ಪಟ್ಟಣದ ಹಿರಿಯ ಮುಖಂಡ ಹಾಗೂ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಹುಸೇನಿ ಅಂತಃಕರಣ, ಮಾನವೀಯತೆ ಮೇಳೈಸಿಕೊಂಡಿರುವ ಅಪರೂಪದ ವ್ಯಕ್ತಿ. ದಶಕಗಳಿಂದ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಿರುವ ಅವರು ತಮ್ಮ ಪುತ್ರನ ಮದುವೆ ಅಂಗವಾಗಿ ಮುಸ್ಲಿಂ ಸಮುದಾಯದ 121 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಭಾನುವಾರ (ಜ.18) ಪಟ್ಟಣದ ಅಕ್ಬರಿ ಮಸ್ಜಿದ್‌ನಲ್ಲಿ ಹಮ್ಮಿಕೊಂಡಿದ್ದಾರೆ.
ಈ ಬೃಹತ್ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿ ಹೊಸ ದಾಖಲೆ ಬರೆಯಲಿದೆ. ಏಕೆಂದರೆ ಕರ್ನಾಟಕ ರಾಜ್ಯದಲ್ಲಿಯೇ ಮುಸ್ಲಿಂ ಸಮುದಾಯದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮಾನ್ವಿ ಪಟ್ಟಣ ಸಾಕ್ಷಿಯಾಗಲಿದೆ.
ಕಾರ್ಯಕ್ರಮದಲ್ಲಿ ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಜಿಲ್ಲೆಯ ಮುಸ್ಲಿಂ ಸಮುದಾಯದ 121 ಜೋಡಿ ನವ ವಧು–ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ. ಮದುವೆಯಲ್ಲಿ ಎಲ್ಲ ನವವಧುಗಳಿಗೆ ತಲಾ ಎರಡು ಜೊತೆ ಸೀರೆ, ವರರಿಗೆ ತಲಾ ಜುಬ್ಬಾ ಪೈಜಾಮ್, ಜಾಕೆಟ್ ಹಾಗೂ ಟೋಪಿ, ಮನೆಗೆ ಅಲ್ಮರಾ, ಪಲ್ಲಂಗ, ಗಾದಿ ಹಾಗೂ ಹೊದಿಕೆಗಳು, ದಿನಬಳಕೆಯ ಎಲ್ಲಾ ಪಾತ್ರೆಗಳನ್ನು ನೀಡುತ್ತಿರುವುದು ಗಮನಾರ್ಹ. ವಿವಾಹವಾಗುವ ಪ್ರತಿ ದಂಪತಿಗೆ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಸರಳ ವಿವಾಹ ಪ್ರೋತ್ಸಾಹ ಧನ ₹50 ಸಾವಿರ ಮಂಜೂರಾತಿಗೆ ಸಂಘಟಕರು ಅಗತ್ಯ ದಾಖಲೆಗಳನ್ನು ಪಡೆದಿದ್ದಾರೆ.
ಸೈಯದ್ ಅಕ್ಬರ್ ಪಾಷಾ ಮತ್ತು ಕುಟುಂಬವರು ತಮ್ಮ ಸ್ವಂತ ಖರ್ಚಿನಲ್ಲಿ ದಾರುಸ್ಸಲಾಮ್ ಸಂಸ್ಥೆಯ ಮೂಲಕ ಇಂತಹ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿ, ಮಾನ್ವಿ ಪಟ್ಟಣ ಹಾಗೂ ರಾಯಚೂರು ಜಿಲ್ಲೆಯ ಕೀರ್ತಿ ರಾಜ್ಯದಾದ್ಯಂತ ಪಸರಿಸುವಂತೆ ಮಾಡಿದ್ದಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೈಯದ್ ಅಕ್ಬರ್ ಪಾಷಾ ಅವರ ಈ ಸೇವಾ ಕಾರ್ಯಕ್ಕೆ ಧರ್ಮಗುರುಗಳು, ಸ್ಥಳೀಯ ಗಣ್ಯರು, ಸ್ನೇಹಿತರು, ಮುಸ್ಲಿಂ ಸಮುದಾಯದ ಮುಖಂಡರು ಸಹಕರಿಸಿ ಪ್ರೋತ್ಸಾಹಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ನೂರಾರು ಯುವಕರು ಸ್ವಯಂ ಸೇವಕರಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಶ್ರಮಿಸುತ್ತಿದ್ದಾರೆ.
ಸೈಯದ್ ಅಕ್ಬರ್ ಪಾಷಾ ತಮ್ಮ ಪುತ್ರನ ಮದುವೆಯನ್ನಷ್ಟೇ ಅದ್ದೂರಿಯಾಗಿ ಮಾಡುವ ಮೂಲಕ ಆರ್ಥಿಕ ಶ್ರೀಮಂತಿಕೆಯ ಪ್ರದರ್ಶನ ಮಾಡಬಹುದಿತ್ತು. ಆದರೆ, ಸಾಮಾಜಿಕ ಕಳಕಳಿ ಹಾಗೂ ಸರಳ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸಲು ಇಂತಹ ಅಪರೂಪದ ಬೃಹತ್ ಕಾರ್ಯಕ್ರಮ ಆಯೋಜಿಸಿ ಹೃದಯ ಶ್ರೀಮಂತಿಕೆ ಮೆರೆಯುತ್ತಿದ್ದಾರೆ ಎಂದು ಇಲ್ಲಿನ ಹಿರಿಯರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ನವದೆಹಲಿಯ ಜಮಾತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಸೈಯ್ಯದ್ ವಲಿಯುಲ್ಲಾಹ್ ಸಯೀದಿ ಫಲಾಹಿ, ವಿಧಾನಸಭಾ ಸ್ವೀಕರ್ ಯು.ಟಿ.ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ಬಿ.ಝಡ್.ಜಮೀರ್ ಅಹ್ಮದ್ ಖಾನ್, ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕ ಜಿ.ಹಂಪಯ್ಯ ನಾಯಕ ಸೇರಿದಂತೆ ಹಲವಾರು ಗಣ್ಯರು ಆಗಮಿಸುತ್ತಿದ್ದಾರೆ.
‘ಉತ್ತಮ ಬೆಂಬಲ ತೃಪ್ತಿ ತಂದಿದೆ’
ನನ್ನ ಪುತ್ರನ ಮದುವೆಯ ಜತೆಗೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮದ ವಧು–ವರರ ಕುಟುಂಬಗಳ ಹಿರಿಯ ಮಗನೆಂದು ಭಾವಿಸಿ ನಾನು ಈ ಮದುವೆ ಕಾರ್ಯದ ಜವಾಬ್ದಾರಿ ಹೊತ್ತಿದ್ದೇನೆ. ಮದುವೆ ಕಾರ್ಯಕ್ಕಾಗಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶವೂ ಇದೆ. ಈ ಪ್ರಯತ್ನಕ್ಕೆ ನಮ್ಮ ಸಮುದಾಯದಿಂದ ಉತ್ತಮ ಬೆಂಬಲ ಸಿಕ್ಕಿರುವುದು ಹೆಚ್ಚು ತೃಪ್ತಿ ತಂದಿದೆ. ಸೈಯದ್ ಅಕ್ಬರ್ ಪಾಷಾ ಸಿವಿಲ್ ಗುತ್ತಿಗೆದಾರ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.