ADVERTISEMENT

‘ಭತ್ತಕ್ಕೆ ಪರ್ಯಾಯವಾಗಿ ಸಾಸಿವೆ ಬೆಳೆ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:33 IST
Last Updated 16 ಮಾರ್ಚ್ 2019, 14:33 IST
ರಾಯಚೂರು ಜಿಲ್ಲೆ ಸಿರವಾರ ಪಟ್ಟಣ ಹೊರವಲಯದ ಸಾಸಿವೆ ಜಮೀನಿನಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಈಚೆಗೆ ರೈತರಿಗಾಗಿ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು
ರಾಯಚೂರು ಜಿಲ್ಲೆ ಸಿರವಾರ ಪಟ್ಟಣ ಹೊರವಲಯದ ಸಾಸಿವೆ ಜಮೀನಿನಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಈಚೆಗೆ ರೈತರಿಗಾಗಿ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು   

ರಾಯಚೂರು: ರೈತರು ಹಿಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗೆ ಪರ್ಯಾಯವಾಗಿ ಸಾಸಿವೆ ಬೇಸಾಯವನ್ನು ಕೈಗೊಳ್ಳಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ.ಎಸ್. ಯಡಹಳ್ಳಿ ಹೇಳಿದರು.

ಜಿಲ್ಲೆಯ ಸಿರವಾರ ಪಟ್ಟಣ ಹೊರವಲಯದ ಜಮೀನಿನಲ್ಲಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರದಿಂದ ಈಚೆಗೆ ಏರ್ಪಡಿಸಿದ್ದ ಸಾಸಿವೆ ಬೆಳೆಯ ಕ್ಷೇತ್ರೊತ್ಸವದಲ್ಲಿ ಮಾತನಾಡಿದರು.

ಸಾಸಿವೆ ಬೆಳೆಯು ಕಡಿಮೆ ಕೀಟ ಹಾಗೂ ರೋಗಗಳ ಬಾಧೆಗೆ ಒಳಗಾಗಿ ಕಡಿಮೆ ವೆಚ್ಚದಲ್ಲಿ ಬೇಸಾಯ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ತುಂಗಭದ್ರ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ಎಡಬಿಡದೆ ಭತ್ತದ ನಂತರ ಭತ್ತವನ್ನು ಬೇಸಾಯ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಇದರೊಂದಿಗೆ ಗಣನೀಯವಾಗಿ ಇಳುವರಿ ಕಡಿಮೆಯಾಗಿದೆ ಎಂದರು.

ADVERTISEMENT

ಈ ನಿಟ್ಟಿನಲ್ಲಿ ಸಿರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭತ್ತದ ಗದ್ದೆಯಲ್ಲಿ ಉಳಿದಿಕೊಂಡಿರುವ ತೇವಾಂಶವನ್ನು ಬಳಸಿಕೊಂಡು ಹಿಂಗಾರಿನಲ್ಲಿ ಕಡಿಮೆ ವೆಚ್ಚದಲ್ಲಿ ಸಾಸಿವೆ ಬೇಸಾಯ ಮಾಡಬಹುದಾಗಿದೆ ಎಂದು ತಿಳಿಸಿದರು.

ಈ ಬೆಳೆಯನ್ನು ಹಿಂಗಾರಿನ ಬೇಸಿಗೆ ಹಂಗಾಮಿನಲ್ಲಿ ಬೆಳೆಯಬಹುದುದಾಗಿದೆ. ನೀರು ನಿಲ್ಲುವ ಪ್ರದೇಶಗಳಲ್ಲಿ ಇದನ್ನು ಬೆಳೆಯಲು ಸಾಧ್ಯವಿಲ್ಲ. ಈ ಬೆಳೆಯನ್ನು ಬೆಳೆ ಪರಿವರ್ತನೆ ಮಿಶ್ರಬೆಳೆ ಪದ್ಧತಿ, ಅಂತರ ಬೆಳೆ ಪದ್ಧತಿ ಹಾಗೂ ಏಕ ಬೆಳೆಯಾಗಿ ಬೆಳೆಯಬಹುದಾಗಿದೆ ಎಂದು ವಿವರಿಸಿದರು.

ನೀರಾವರಿ ನಿರ್ವಹಣೆಯನ್ನು ಅಂತರ ಬೇಸಾಯ ಮತ್ತು ಕಳೆ ನಿರ್ವಹಣೆ ಮತ್ತು ಕೈಗೊಳ್ಳಬಹುದಾಗಿದೆ. ಕಳೆಗಳನ್ನು ಪ್ರತಿ ಹೇಕ್ಟರ್‌ಗೆ 1 ರಿಂದ 1.5 ಕಿಲೋ ಗ್ರಾಂ ನಂತೆ ನೈಟ್ರೋಫೆನ್ ಅಥವಾ 1 ಕಿಲೋ ಗ್ರಾಂ ಐಯಿಷೋಪ್ರೋಟುರಾನ್ ಕಳೆನಾಶಕವನ್ನು 800 ರಿಂದ 1000 ಲೀಟರ್ ನೀರಿನಲ್ಲಿ ಬೆರಸಿ ಕಳೆಗಳ ಮೊಳಕೆ ಬರುವ ಪೂರ್ವದಲ್ಲಿ ಸಿಂಪಡಿಸಬಹುದು ಎಂದು ತಿಳಿಸಿದರು.

ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್. ಮಾತನಾಡಿ, ಸಾಸಿವೆ ಬೆಳೆಯಲ್ಲಿ ಕೀಟ ಹಾಗೂ ರೋಗಗಳ ಹಾವಳಿ ಕಡಿಮೆ ಆಗಿದೆ. ಬೇಸಾಯದ ವೆಚ್ಚ ಇತರೆ ಹಿಂಗಾರು ಬೆಳೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಹಿಂಗಾರಿನಲ್ಲಿ ಭತ್ತಕ್ಕೆ ಪರ್ಯಾಯವಾಗಿ ಇದು ಸೂಕ್ತವಾಗಿದೆ. ಮುಂಬರುವ ದಿನಗಳಲ್ಲಿ ತುಂಗಭದ್ರ ಮೇಲ್ದಂಡೆ ಅಚ್ಚುಕಟ್ಟೆ ಪ್ರದೇಶದಲ್ಲಿ ರೈತರ ಆರ್ಥಿಕತೆಯ ಆಶಾಕಾರಣವಾಗಿ ಭತ್ತಕ್ಕೆ ಪರ್ಯಾಯವಾಗಿ ಸಾಸಿವೆ ಬೆಳೆ ಹೆಚ್ಚಿನ ಪ್ರದೇಶದಲ್ಲಿ ವಿಸ್ತರಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.