ADVERTISEMENT

ನಾಗರಪಂಚಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 12:48 IST
Last Updated 2 ಆಗಸ್ಟ್ 2022, 12:48 IST
ಶಕ್ತಿನಗರದಲ್ಲಿ ಮಹಿಳೆಯರು ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲೆರೆದರು
ಶಕ್ತಿನಗರದಲ್ಲಿ ಮಹಿಳೆಯರು ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲೆರೆದರು   

ಶಕ್ತಿನಗರ: ದೇವಸೂಗೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಮಹಿಳೆಯರು ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲೆರೆಯುವ ಮೂಲಕ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಗ್ರಾಮೀಣ ಪ್ರದೇಶದ ಮನೆ-ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಮಹಿಳೆಯರು ಮಕ್ಕಳೊಂದಿಗೆ ಹೊಸ ಬಟ್ಟೆ ತೊಟ್ಟು, ನಾಗದೇವತೆ ದೇವಸ್ಥಾನ, ಕಲ್ಲು ನಾಗರ ಮೂರ್ತಿ, ಹುತ್ತಗಳಿರುವ ಪ್ರದೇಶಗಳಿಗೆ ತೆರಳಿ ಕುಟುಂಬದ ಎಲ್ಲರಿಗೂ ಒಳ್ಳೆಯದಾಗಲೆಂದು ಬೇಡಿಕೊಳ್ಳುತ್ತ ದೇವರಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.

ಪುಟಾಣಿ, ಗೋಧಿ, ಶೇಂಗಾ ಹಾಗೂ ರವೆಯಿಂದ ಉಂಡಿ ಹಾಗೂ ಕಡುಬು ತಯಾರಿಸಿ ನೈವೇದ್ಯ ಮಾಡಿ ತಿಂದು ಸಂಭ್ರಮಿಸಿದರು.

ಮಕ್ಕಳು ಆಡಿ ಸಂಭ್ರಮಿಸುವುದರ ಜತೆಗೆ ಒಣಕೊಬ್ಬರಿ ಬಟ್ಟಲುಗಳಲ್ಲಿ ದಾರ ಕಟ್ಟಿಕೊಂಡು ಬುಗರಿಯಂತೆ ತಿರುಗಿಸಿ ಆಟವಾಡಿದರು. ನೂಲು ತುಂಡಾದ ಬಳಿಕ ಒಣಕೊಬ್ಬರಿ ತಿಂದು ಸಂತಸ ಪಟ್ಟರು.

ADVERTISEMENT

ನಾಗರ ಮೂರ್ತಿಗಳಿಗೆ ಹಾಲು

ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ತ್ರಯಂಭಕೇಶ್ವರ, ಈಶ್ವರ ಹಾಗೂ ಕನಕ ನಗರದ ಆಂಜನೇಯ ದೇವಸ್ಥಾನ ಮತ್ತು ಜಲ ಸಂಪನ್ಮೂಲ ಕಚೇರಿ ಎದುರಿನ ನಾಗರಕಟ್ಟೆಗೆ ಆಗಮಿಸಿದ ಮಹಿಳೆಯರು ಮತ್ತು ಮಕ್ಕಳು ನಾಗರ ಮೂರ್ತಿಗೆ ಹಾಲೆರೆದು ನೈವೇದ್ಯ ಸಮರ್ಪಿಸಿದರು.

ಮಕ್ಕಳು ಕೊಬ್ಬರಿ ಬಟ್ಟಲು ಆಡಿಸಿ ಮತ್ತು ಜೋಕಾಲಿ ಜೀಕಿ ಸಂಭ್ರಮಪಟ್ಟರು.

ಸಮೀಪದ ಉಟಕನೂರು ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ನಾಗರ ಪಂಚಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಉಟಕನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಾಗ ಮೂರ್ತಿಗೆ ಹಾಲೆರದು ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.