ADVERTISEMENT

ರಾಯಚೂರು: ಪ್ರವಾಸಿಗರ ಸೆಳೆಯುವ ಐತಿಹಾಸಿಕ ತಾಣ ನಾರದಗಡ್ಡೆ

ಬಾವಸಲಿ
Published 10 ಅಕ್ಟೋಬರ್ 2023, 5:41 IST
Last Updated 10 ಅಕ್ಟೋಬರ್ 2023, 5:41 IST
ರಾಯಚೂರು ತಾಲ್ಲೂಕಿನ ಬುರ್ದಿಪಾಡ ಗ್ರಾಮ ಸಮೀಪದ ನಾರದಗಡ್ಡೆಗೆ ದೋಣಿಯಲ್ಲಿ ತೆರಳುತ್ತಿರುವ ಭಕ್ತರು
ರಾಯಚೂರು ತಾಲ್ಲೂಕಿನ ಬುರ್ದಿಪಾಡ ಗ್ರಾಮ ಸಮೀಪದ ನಾರದಗಡ್ಡೆಗೆ ದೋಣಿಯಲ್ಲಿ ತೆರಳುತ್ತಿರುವ ಭಕ್ತರು   

ರಾಯಚೂರು: ಭತ್ತದ ನಾಡು, ಚಿನ್ನದ ನಾಡು, ದೋ ಅಬ್ ಪ್ರದೇಶ ಎಂದು ಕರೆಸಿಕೊಳ್ಳುತ್ತಿರುವ ರಾಯಚೂರು ಜಿಲ್ಲೆ ಐತಿಹಾಸಿಕವಾಗಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಪ್ರಮುಖ ಪ್ರವಾಸಿ ತಾಣಗಳ ಪೈಕಿ ರಾಯಚೂರು ತಾಲ್ಲೂಕಿನ ಬುರ್ದಿಪಾಡ ಗ್ರಾಮದ ಸಮೀಪದ ನಾರದಗಡ್ಡೆಯೂ ಒಂದು.

ನಾರದಗಡ್ಡೆ ಒಂದು ದ್ವೀಪ ಪ್ರದೇಶವಾಗಿದೆ. ನದಿಯ ಮಧ್ಯಭಾಗದಲ್ಲಿ ಚನ್ನಬಸವೇಶ್ವರ ದೇವಾಲಯ ಇರುವುದರಿಂದ ಐತಿಹಾಸಿಕವಾಗಿ ಗುರುತಿಸಿಕೊಂಡಿದೆ.

ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ನಾರದಗಡ್ಡೆ ಸುತ್ತಲೂ ನದಿಯಿದ್ದು, ಒಂದು ಭಾಗದಲ್ಲಿ ಚೆನ್ನಬಸವೇಶ್ವರ ದೇವಸ್ಥಾನವಿದೆ. ಇದನ್ನು ನೋಡುವುದೇ ಒಂದು ಖುಷಿ. ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ನಾರದಗಡ್ಡೆ ವೀಕ್ಷಣೆಗೆ ಆಂಧ್ರಪ್ರದೇಶ, ಮಹಾರಾಷ್ಟ್ರದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ADVERTISEMENT

ಐತಿಹಾಸಿಕ ಹಿನ್ನೆಲೆ: ನದಿಯ ಮಧ್ಯದಲ್ಲಿ ಇರುವ ನಾರದಗಡ್ಡೆ ಚನ್ನಬಸವೇಶ್ವರ ದೇವಸ್ಥಾನಕ್ಕೆ ಹೋಗುವುದು ಒಂದು ಸಾಹಸದ ಕೆಲಸವೇ ಸರಿ. ಇಲ್ಲಿಗೆ ತೆಪ್ಪದಲ್ಲಿ ಬಂದರೆ ಮಾತ್ರ ದರ್ಶನ ಪಡೆಯಲು ಸಾಧ್ಯವಾಗುತ್ತದೆ.

ನಾರದಮುನಿಗಳು ಇದೇ ನಡುಗಡ್ಡೆಗೆ ಬಂದು ತಪಸ್ಸು ಮಾಡಿದ್ದರು ಎನ್ನುವ ಪ್ರತೀತಿ ಇದೆ. ಹೀಗಾಗಿ ನಡುಗಡ್ಡೆಗೆ ನಾರದ ಮನಿಗಳ ಹೆಸರು ಬಂದಿದೆ.

ಚೆನ್ನಬಸವೇಶ್ವರ ಸ್ವಾಮೀಜಿ ಶ್ರೀಶೈಲಕ್ಕೆ ಹೋದಾಗ ಅಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನವಾಗುತ್ತದೆ. ನೀವು ಮುಂದೊಂದು ದಿನ ದೊಡ್ಡ ತಪಸ್ವಿಗಳಾಗುವಿರಿ ನಿಮ್ಮ ಹೆಸರಲ್ಲಿ ಜಾತ್ರೆ, ರಥೋತ್ಸವ, ಪೂಜೆ, ಪುನಸ್ಕಾರಗಳು ನಡೆಯುತ್ತವೆ ಎನ್ನುವ ಆಶೀರ್ವಾದ ದೊರೆಯಿತು ಎನ್ನಲಾಗಿದೆ.

ದೈವವಾಕ್ಯದಂತೆ ಚೆನ್ನಬಸವೇಶ್ವರ ಸ್ವಾಮೀಜಿ ನದಿಯ ದಡಕ್ಕೆ ಬಂದು ನಾರದ ಗಡ್ಡೆಗೆ ಒಯ್ಯುವಂತೆ ಅಂಬಿಗರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆದರೆ, ಅಂಬಿಗರು ಸ್ವಾಮೀಜಿಯನ್ನು ಆಚೆಗೆ ಒಯ್ಯಲು ಒಪ್ಪುವುದಿಲ್ಲ. ಆಗ ಸ್ವಾಮೀಜಿ ಕಂಬಳಿ ಗದ್ದುಗೆ ಮಾಡಿಕೊಂಡು ಅದರ ಮೇಲೆ ನಡುಗಡ್ಡೆ ಸೇರುತ್ತಾರೆ. ಇದನ್ನು ನೋಡಿದ ವ್ಯಕ್ತಿಗಳು ಗ್ರಾಮದ ಜನತೆಗೆ ಸುದ್ದಿ ಮುಟ್ಟಿಸುತ್ತಾರೆ. ಅವರೊಬ್ಬ ಮಹಾಪುರಷರೇ ಇರಬಹುದು ಎಂದು ಊರಿನ ಜನ ಭಾವಿಸುತ್ತಾರೆ.

ಸೌಕರ್ಯದ ಕೊರತೆ: ದ್ವೀಪ ಪ್ರದೇಶವಾದ ನಾಗರದಗಡ್ಡೆ ಭಕ್ತರ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿತ್ತು. ದೇವಸ್ಥಾನ ಸಮಿತಿ ಹಾಗೂ ಜಿಲ್ಲಾಡಳಿತದ ನಿರಾಸಕ್ತಿಯಿಂದ ಧಾರ್ಮಿಕ ಪ್ರವಾಸಿ ತಾಣದ ಆಕರ್ಷಣೆ ಕಳೆ ಗುಂದಿದೆ.

ಚೆನ್ನಬಸವೇಶ್ವರ ಸ್ವಾಮೀಜಿ ಶ್ರೀಶೈಲದಿಂದ ಪಾದಯಾತ್ರೆಯಲ್ಲಿ ಹೊರಟು ನಾರದಗಡ್ಡೆಗೆ ತಲುಪಿದಾಗ ಹೈದರಾಬಾದ್‌ ನವಾಬರು ಜಮೀನು ನೀಡಿದ್ದರು. ಇಂದು ಮಠದ ಆಸ್ತಿಯೂ ಒತ್ತುವರಿಯಾಗಿದೆ.

ಗ್ರಾಮದಲ್ಲಿ ಹಳೆಯ ತಲೆಮಾರಿನವರು ಮಾತ್ರ ತೆಪ್ಪ ನಡೆಸುತ್ತಿದ್ದರು. ಹೊಸ ಯುವ ಪೀಳಿಗೆಗೆ ತೆಪ್ಪ ನಡೆಸುವ ಆಸಕ್ತಿ ಇಲ್ಲ. ಹೀಗಾಗಿ ಪ್ರವಾಸಿಗರು ಹಾಗೂ ಭಕ್ತರಿಗೆ ನಾರದನ ಗಡ್ಡೆ ತಲುಪಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ನಾರದಗಡ್ಡೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮ ಬೆಳವಣಿಗೆಯಾಗಲಿದೆ ಎಂದು ಬುರ್ದಿಪಾಡ ಗ್ರಾಮದ ಧರ್ಮರೆಡ್ಡಿ ಹೇಳುತ್ತಾರೆ.

ಹೀಗೆ ಬನ್ನಿ: ರಾಯಚೂರಿನಿಂದ ಹಳೆಯ ಬುರ್ದಿಪಾಡ ಗ್ರಾಮಕ್ಕೆ ಬಂದು ಅಲ್ಲಿಂದ ತೆಪ್ಪದ ಮೂಲಕ ನಾರದಗಡ್ಡೆಗೆ ಹೋಗಬೇಕು. ಈ ಹಿಂದೆ ಮಠದ ವತಿಯಿಂದ ನಿರ್ವಹಣೆ ಮಾಡಲಾಗುತ್ತಿತ್ತು. ನಂತರ ನಡೆದ ಅಹಿತಕರ ಬೆಳವಣಿಗೆಯಲ್ಲಿ ಗುರು ಶಿಷ್ಯರ ಕಲಹದಿಂದಾಗಿ ನಿರ್ವಹಣೆಯೇ ನಿಂತು ಬಿಟ್ಟಿತು. ಪ್ರಸ್ತುತ ಇದು ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.