ADVERTISEMENT

ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ‘ವಿನೋದದೊಂದಿಗೆ ವಿಜ್ಞಾನದ ಜ್ಞಾನ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 13:36 IST
Last Updated 28 ಫೆಬ್ರುವರಿ 2020, 13:36 IST
ರಾಯಚೂರು ರೇಸ್ ಕಾನ್ಸೆಪ್ಟ್‌ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಶಾಲಾ ಮಕ್ಕಳು ಮುಖ್ಯಗುರು ಭಾವನಾ ಅವರ ರಕ್ತದ ಗುಂಪು ಪರೀಕ್ಷೆ ಮಾಡಿ, ವರದಿ ಪತ್ರವನ್ನು ಹಸ್ತಾಂತರಿಸಿದರು
ರಾಯಚೂರು ರೇಸ್ ಕಾನ್ಸೆಪ್ಟ್‌ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಶಾಲಾ ಮಕ್ಕಳು ಮುಖ್ಯಗುರು ಭಾವನಾ ಅವರ ರಕ್ತದ ಗುಂಪು ಪರೀಕ್ಷೆ ಮಾಡಿ, ವರದಿ ಪತ್ರವನ್ನು ಹಸ್ತಾಂತರಿಸಿದರು   

ರಾಯಚೂರು: ‘ಶಿಕ್ಷಕರ ಮಾರ್ಗದರ್ಶನಲ್ಲಿ ಶಾಲೆಗಳಲ್ಲಿ ತಯಾರಿಸುವ ವಿಜ್ಞಾನ ವಸ್ತು ಮಾದರಿಗಳಿಂದ ವಿನೋದದ ಮೂಲಕವೇ ವಿಜ್ಞಾನದ ಕಡೆಗೆ ಮಕ್ಕಳ ಜ್ಞಾನವು ವೃದ್ಧಿಸುತ್ತದೆ’ ಎಂದು ರೇಸ್‌ ಕನ್ಸೆಪ್ಟ್‌ ಶಾಲಾ ಸಮೂಹದ ಆಡಳಿತಾಧಿಕಾರಿ ಶಾರದಾ ಚಂದ್ರಮೋಹನರೆಡ್ಡಿ ಹೇಳಿದರು.

ನಗರದ ಮಂತ್ರಾಲಯ ರಸ್ತೆಯಲ್ಲಿರುವ ರೇಸ್‌ ಕನ್ಸೆಪ್ಟ್‌ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ದಿನಾಚರಣೆಯ ಈ ವರ್ಷದ ಧ್ಯೇಯ ‘ವಿಜ್ಞಾನದಲ್ಲಿ ಮಹಿಳೆ’ ವಾಕ್ಯವು ಪ್ರಮುಖವಾಗಿದೆ. ನಂದಿನಿ ಹರಿನಾಥ, ರಿತು ಕರಿದಾಳ ಅವರಂತಹ ಮಹಿಳಾ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ADVERTISEMENT

ಭಾರತದ ಮಹಾನ್‌ ವಿಜ್ಞಾನಿ ಸಿ.ವಿ.ರಾಮನ್‌ ಅವರು ಫೆಬ್ರುವರಿ 28 ರ 1928 ರಲ್ಲಿ ‘ಬೆಳಕಿನ ಪರಿಣಾಮ’ವನ್ನು ಕಂಡುಹಿಡಿದ ದಿನದ ಸ್ಮರಣೆಗಾಗಿ ಈ ದಿನವನ್ನು ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಬರಿಗಣ್ಣಿಗೆ ಕಾಣುವ ಬೆಳಕು ಬಿಳಿಯಾಗಿದ್ದರೂ ಅದರಲ್ಲಿ ಏಳು ಬಣ್ಣಗಳು ಇರುತ್ತವೆ ಎಂಬುದನ್ನು ಪ್ರಯೋಗದಿಂದ ತೋರಿಸಿದ್ದರು ಎಂದು ತಿಳಿಸಿದರು.

ಮಾನವ ಕುಲದ ಅಭಿವೃದ್ಧಿಗಾಗಿ ಹಾಗೂ ಶಾಂತಿಗಾಗಿ ಶ್ರಮಿಸುತ್ತಿರುವ ವಿಶ್ವದ ಎಲ್ಲಾ ವಿಜ್ಞಾನಿಗಳಿಗೆ ಈ ದಿನದಂದು ಅಭಿನಂದನೆ ತಿಳಿಸಬೇಕು. ವಿಜ್ಞಾನದ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.

ರೇಸ್‌ ಕಾನ್ಸೆಪ್ಟ್‌ ಶಾಲೆಯ ಮುಖ್ಯಗುರು ಭಾವನಾ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಹೆಚ್ಚಿಸಬೇಕಿದೆ. ಇದಕ್ಕಾಗಿ ವಿಜ್ಞಾನ ಪ್ರದರ್ಶಗಳು ಬಹಳ ಸಹಕಾರಿಯಾಗಿವೆ ಎಂದು ಹೇಳಿದರು.

ವಿಜ್ಞಾನ ಪ್ರದರ್ಶನ ವಿಶೇಷ: ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳು ವಿವಿಧ ವಿಷಯಗಳಲ್ಲಿ ಸಿದ್ಧಪಡಿಸಿದ್ದ ವಿಜ್ಞಾನ ಮಾದರಿಗಳು ವಿಶೇಷವಾಗಿದ್ದವು. ಭೂಮಿಯ ಪದರುಗಳು, ಗೋವಿನ ಸಗಣಿ, ಕಟ್ಟಿಗೆ ಪುಡಿ ಹಾಗೂ ಜಿಂಕ್‌ ಪುಡಿಗಳನ್ನು ಮಿಶ್ರಣಗೊಳಿಸಿ ಅಗರಬತ್ತಿ ತಯಾರಿಸುವ ವಿಧಾನ, ಗೋಧಿ ಹಿಟ್ಟಿನಿಂದ ತಯಾರಿಸಿ ಚಮಚಗಳು, ಅರಣ್ಯ ನಾಶದ ದುಷ್ಪರಿಣಾಮ, ಮನುಷ್ಯನ ಜೀರ್ಣಕ್ರಿಯೆ.. ಹೀಗೆ ಅನೇಕ ಮಾದರಿಗಳು ಗಮನ ಸೆಳೆದವು.

ಶಾಲೆಯ ವಿದ್ಯಾರ್ಥಿನಿಯರು ರಕ್ತದ ಗುಂಪು ತಿಳಿಯುವ ವಿಧಾನವನ್ನು ಪ್ರಯೋಗ ಮಾಡಿದರು. ತ್ರೀಡಿ ಚಿತ್ರ ವೀಕ್ಷಣೆ, ಸೂರ್ಯಮಂಡಲ, ಕೊರೊನಾ ವೈರಸ್‌ ಕುರಿತಾದ ಪ್ರಾತ್ಯಕ್ಷಿಕೆಗಳು ವಿಶೇಷವಾಗಿದ್ದವು. ಮಕ್ಕಳು ತುಬಾ ಆಸಕ್ತಿಯಿಂದ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಶಾಲೆಯ ಶಿಕ್ಷಕರಿಗೆ, ಸ್ನೇಹಿತರಿಗೆ ವಿಜ್ಞಾನದ ವಿವರಣೆಯನ್ನು ಉತ್ಸಾಹದಿಂದ ಮನವರಿಕೆ ಮಾಡಿದರು.

ರೇಸ್‌ ಕಾನ್ಸೆಪ್ಟ್‌ ಶಾಲಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಮೋಹನ್‌ ರೆಡ್ಡಿ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.