ರಾಯಚೂರು: ನಗರದ ಕೃಷಿ ವಿಶ್ವವಿದ್ಯಾಲಯದ ಎದುರಿನ ರಸ್ತೆ ಬಳಿ ಫೆಬ್ರುವರಿ 8 ರಂದು ಬೆಳಿಗ್ಗೆ 9 ಗಂಟೆಗೆ ‘ನೀರಾ ಪಾರ್ಲರ್’ ಉದ್ಘಾಟನೆ ಸಮಾರಂಭ ನಡೆಯಲಿದೆ ಎಂದು ಮಲೆನಾಡು ನಟ್ಸ್ ಆ್ಯಂಡ್ ಸ್ಪೈಸ್ ಪ್ರೊಡುಸರ್ ಕಂಪೆನಿ ಅಧ್ಯಕ್ಷ ಮನೋಹರ ಮಸ್ಕಿ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಪಾರ್ಲರ್ ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹಾಗೂ ಶಾಸಕ ದದ್ದಲ್ ಬಸನಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ತೆಂಗಿನ ಮರದಿಂದ ಪಡೆಯುವ ಈ ನೀರಾ ಆರೋಗ್ಯಕರ ಪೇಯವಾಗಿದೆ. ಅದು 4 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದರೆ ಮಾತ್ರ ನೀರಾ ಆಗಿರುತ್ತದೆ. ನಿರ್ದಿಷ್ಟ ಶೀಥಿಲಕರಣದಲ್ಲಿ ಸಂರಕ್ಷಿಸಲು ವಿಶೇಷ ಪೆಟ್ಟಿಗೆ ಸಿದ್ಧಪಡಿಸಲಾಗಿದೆ ಎಂದರು.
ನೀರಾ ಪ್ರಕೃತಿ ದತ್ತವಾದ ಸಹಜ ಪೇಯ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಗಳು ವರದಿ ನೀಡಿವೆ. ರಾಜ್ಯದ 27 ಕಡೆಗಳಲ್ಲಿ ಪಾರ್ಲರ್ ಆರಂಭವಾಗಿವೆ. ಈಗ ರಾಯಚೂರಿನಲ್ಲಿ ತೆರೆಯಲಾಗುತ್ತಿದೆ. ಶಿವಮೊಗ್ಗದ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ಪ್ಯಾಕಿಂಗ್ ಮತ್ತು ಸಂಸ್ಕರಣೆ ಘಟಕವಿದೆ. ಅಲ್ಲಿಂದಲೇ ಪೂರೈಸಲಾಗುವುದು. ಎರಡು ದಿನಗಳಲ್ಲಿಯೇ ಅದನ್ನು ಬಳಸಬೇಕಾಗುತ್ತದೆ ಎಂದು ತಿಳಿಸಿದರು.
ಕಲ್ಪರಸ, ಕಲ್ಪಾಮೃತ ಎಂಬ ಹೆಸರಿನಲ್ಲಿ ಕರೆಯುವ ಈ ಆರೋಗ್ಯಕರ ಪೇಯವನ್ನು ನಿಷೇಧಿಸಲ್ಪಟ್ಟಿತ್ತು. ಆಯುರ್ವೇದದಲ್ಲಿ 400 ವರ್ಷಗಳಿಗಿಂತಲೂ ಹೆಚ್ಚು ಕಾಲ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯಾಗಿದ್ದ ನೀರಾವನ್ನು ನಿಷೇಧಿಸಲಾಗಿತ್ತು, ನಿಷೇಧ ತೆರವಿಗೆ ರೈತ ಹೋರಾಟ ಮತ್ತು ಚಳವಳಿಯನ್ನು ಮಾಡಲಾಯಿತು. ಇದು ಆಲ್ಕೋಹಾಲ್ ಪ್ರಮಾಣ ಶೂನ್ಯವಾಗಿದ್ದು, ನೀರಾದ ಬಹುತೇಕ ಮತ್ತು ರಾಸಾಯನಿಕ ಗುಣಲಕ್ಷಣಗಳು ಆರೋಗ್ಯಪೂರಕವಾಗಿದೆ ಎಂದು ಸಾಬೀತಾಗಿದೆ. ಇದರಿಂದಾಗಿ 2011ರಲ್ಲಿ ನೀರಾ ನಿಷೇಧ ತೆರವು ಮಾಡಿ ಜನರ ಬಳಕೆಗೆ ಅಧಿಕೃತಗೊಳಿಸಲಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.