ADVERTISEMENT

‘ಸಿದ್ದರಾಮಯ್ಯ ಟೀಕಿಸುವ ನೈತಿಕತೆ ಈಶ್ವರಪ್ಪಗೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 14:33 IST
Last Updated 12 ಜನವರಿ 2021, 14:33 IST

ಜಾಲಹಳ್ಳಿ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಮಾಡುವ ನೈತಿಕತೆ ಸಚಿವ ಈಶ್ವರಪ್ಪ ಅವರಿಗೆ ಇಲ್ಲ’ ಎಂದು ಹೆಬ್ಬಾಳ ಕ್ಷೇತ್ರದ ಶಾಸಕ ಸುರೇಶ ಬೈರತಿ ಹೇಳಿದರು.

ಸಮೀಪದ ತಿಂಥಣಿ ಬ್ರಿಜ್‌ನಲ್ಲಿ ನಡೆಯುತ್ತಿರುವ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲಮತ ಸಾಂಸ್ಕೃತಿಕ ವೈಭವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.

‘40 ವರ್ಷಗಳಿಂದ ನಿರಂತರವಾಗಿ ವಿವಿಧ ಸಣ್ಣ, ಪುಟ್ಟ ಸಮಾಜದ ಏಳಿಗೆಗಾಗಿಯೇ ತಮ್ಮ ಜೀವನ ಮುಡಿಪು ಇಟ್ಟಿರುವ ತಮ್ಮ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಸಚಿವ ಈಶ್ವರಪ್ಪ ಅವರು ವಿನಾಕಾರಣ ಇಲ್ಲ, ಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಕುರುಬ ಸಮಾಜಕ್ಕೆ ಎಸ್‌.ಟಿ ಮೀಸಲಾತಿ ಕೋಡಿಸುವ ಕೆಲಸ ಮಾಡಲಿ’ ಎಂದರು.

ADVERTISEMENT

‘ಕೇಂದ್ರ ಹಾಗೂ ರಾಜ್ಯ ಎರಡು ಕಡೆಗೆ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ವಿನಾಕಾರಣ ಜನರನ್ನು ಪ್ರತಿಭಟನೆಗೆ ಇಳಿಸುವುದು ಯಾವ ನ್ಯಾಯ. ಯಾವುದೇ ಜನಾಂಗಕ್ಕೆ ಮೀಸಲಾತಿ ಪಡೆಯಬೇಕಾದರೆ, ಸಂವಿದಾನದಲ್ಲಿ ಕೆಲವು ನೇಯಮಾವಳಿಗಳನ್ನು ಮಾಡಿದ್ದಾರೆ. ಅದನ್ನು ಪೂರ್ಣಗೊಳಿಸದೇ ಹೋರಾಟ ಮಾಡಲು ಸಿದ್ದರಾಮಯ್ಯ ಬರುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಪಕ್ಷದಿಂದ ಕುರುಬ ಸಮಾಜದ ಎಷ್ಟು ಮುಖಂಡರಿಗೆ ವಿಧಾನ ಸಭೆಗೆ ಟಿಕೆಟ್‌ ಕೋಡಿಸಿದ್ದೀರಿ ಎಂದು ಸಮಾಜದ ಯುವಕರು ಸಚಿವ ಈಶ್ವರಪ್ಪ ಅವರಿಗೆ ಪ್ರಶ್ನೆ ಮಾಡಬೇಕು. ಸಿದ್ದರಾಮಯ್ಯ ಅವರು ಕುರುಬ ಸಮಾಜದ ಮುಖಂಡರಿಗೆ ಕಾಂಗ್ರೆಸ್‌ ಪಕ್ಷದಿಂದ 14 ಜನಕ್ಕೆ ಟಿಕೆಟ್‌ ಕೋಡಿಸಿ 9 ಜನಕ್ಕೆ ಗೆಲ್ಲಿಸಿದರು. ಮೂರು ಜನ ಲೋಕ ಸಭೆಗೆ ಟಿಕೆಟ್‌ ಕೊಡಿಸಿದರು. ಅ ರೀತಿ ಏನಾದರೂ ಈಶ್ವರಪ್ಪ ಸಮಾಜಕ್ಕೆ ಕೆಲಸ ಮಾಡಿದ್ದಾರಾ’ ಎಂದು ಪ್ರಶ್ನಿಸಿದರು. ಕೊಪ್ಪಳ ಶಾಸಕ ರಾಘವೇಂದ್ರ ಇಟ್ನಾಳ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾರಾಷ್ಟ್ರದ ಆರ್‌ಎಸ್‌ಪಿ ಪಕ್ಷದ ರಾಷ್ಟ್ರಾಧ್ಯಕ್ಷ ಮಹದೇವ ಜಾನಕರ್‌ ವಹಿಸಿದ್ದರು. ಸಾನಿಧ್ಯ ಕನಕಗುರು ಪೀಠ ಸಿದ್ದರಾಮಾನಂದಪುರಿ ಸ್ವಾಮೀಜಿ ವಹಿಸಿದ್ದರು.

ಶಾಸಕ ಡಿ.ಎಸ್‌.ಹುಲಗೇರಿ, ಮುಖಂಡರಾದ ಅಮರೇಗೌಡ ಬಯ್ಯಾಪುರ, ಎನ್‌.ಎಸ್‌. ಬೋಸರಾಜು, ಹಂಪಯ್ಯ ನಾಯಕ, ಆರ್‌. ರಾಜಣ್ಣ, ಬಿ.ಎಲ್‌.ನಾಗರಾಜ, ಕೆ.ಎಂ. ರಾಮಚಂದ್ರ ಸೇರಿದಂತೆ ಆನೇಕ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.