ADVERTISEMENT

ಸಡಿಲಿಕೆಯಾದರೂ ಸಹಜತೆಗೆ ಮರಳದ ಜೀವನ

ನಿರೀಕ್ಷಿತ ವಹಿವಾಟುಯಿಲ್ಲದೆ ನಿರಾಸೆ ಅನುಭವಿಸಿದ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:26 IST
Last Updated 14 ಜೂನ್ 2021, 17:26 IST
ರಾಯಚೂರು ನಗರದ ತೀನ್‌ ಕಂದಿಲ್‌ ವೃತ್ತದಲ್ಲಿ ಸೋಮವಾರ ಕಂಡುಬಂದ ನೋಟ
ರಾಯಚೂರು ನಗರದ ತೀನ್‌ ಕಂದಿಲ್‌ ವೃತ್ತದಲ್ಲಿ ಸೋಮವಾರ ಕಂಡುಬಂದ ನೋಟ   

ರಾಯಚೂರು: ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ಜನಜೀವನ ಸಹಜ ಇರಲಿಲ್ಲ.

ಪ್ರಮುಖ ವೃತ್ತಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಜನಸಂಚಾರ ಮತ್ತು ವಾಹನಗಳ ಸಂಚಾರ ವಿರಳವಾಗಿತ್ತು. ಅಗತ್ಯ ವಸ್ತುಗಳು ಮತ್ತು ತರಕಾರಿ ಖರೀದಿಸುವುದಕ್ಕಾಗಿ ಜನರು ಮುಗಿಬೀಳಬಹುದು ಎಂದು ನಿರೀಕ್ಷಿಸಿದ್ದ ವ್ಯಾಪಾರಿಗಳು ಮಧ್ಯಾಹ್ನದವರೆಗೂ ಕಾದು ಕುಳಿತು ನಿರಾಸೆ ಅನುಭವಿಸಬೇಕಾಯಿತು. ಕಿರಾಣಿ ಅಂಗಡಿಗಳು, ರೊಟ್ಟಿ ಕೇಂದ್ರಗಳು, ಪಾರ್ಸಲ್‌ ವ್ಯವಸ್ಥೆ ಮಾಡಿರುವ ಹೋಟೆಲ್‌ಗಳು, ಮದ್ಯದ ಅಂಗಡಿಗಳ ಎದುರು ಸಾಮಾನ್ಯ ದಿನಗಳಲ್ಲಿ ಕಾಣುತ್ತಿದ್ದ ನೋಟ ಇರಲಿಲ್ಲ.

ವಾರದ ಆರಂಭದ ದಿನ ಸೋಮವಾರ ಸಾಮಾನ್ಯಗಾಗಿ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದರೂ ವಾಹನಗಳ ದಟ್ಟಣೆ ಮತ್ತು ಜನದಟ್ಟಣೆ ಇರಬೇಕಾಗಿತ್ತು. ಲಾಕ್‌ಡೌನ್‌ ಸಡಿಲಿಕೆಯ ಮೊದಲ ದಿನವಾಗಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿಯೇ ಮಾರುಕಟ್ಟೆಗೆ ಬರಬಹುದು ಎಂದು ಪೊಲೀಸರು ವಿವಿಧ ಕಡೆಗಳಲ್ಲಿ ನಿಗಾ ವಹಿಸಿದ್ದರು. ಆದರೆ, ಕೋವಿಡ್‌ ಸಂಕಷ್ಟಕ್ಕೆ ಒಳಗಾಗಿರುವ ಜನರು ಸಹಜತೆಗೆ ಮರಳಲು ಮತ್ತಷ್ಟು ದಿನಗಳು ಬೇಕಾಗುತ್ತದೆ ಎನ್ನುವುದು ಎದ್ದು ಕಾಣುತ್ತಿದೆ.

ADVERTISEMENT

‘ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುಗಳ ದರ ಏರಿಕೆ ಆಗಿದೆ. ಲಾಕ್‌ಡೌನ್‌ನಿಂದ ಖರೀದಿಸುವ ಶಕ್ತಿಯೂ ಜನರಲ್ಲಿ ಉಳಿದಿಲ್ಲ. ಹೀಗಾಗಿ ಜನರು ಮನೆಗಳಿಂದ ಹೊರಬರುತ್ತಿಲ್ಲ. ಕ್ರಮೇಣ ಜೀವನ ಸಹಜತೆಗೆ ಬರುತ್ತದೆ. ಸರ್ಕಾರದಿಂದ ಏನಾದರೂ ಪರಿಹಾರ ಘೋಷಣೆ ಮಾಡಬೇಕು’ ಎಂದು ಅಜಾದ್‌ ನಗರ ನಿವಾಸಿ ಚಂದ್ರಶೇಖರ್ ಹೇಳಿದರು.

ಉಪನೋಂದಾಣಾಧಿಕಾರಿ ಕಚೇರಿ, ಆರ್‌ಟಿಓ ಕಚೇರಿ, ಕೋರ್ಟ್‌ ಎದುರು, ತಹಶೀಲ್ದಾರ್‌ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದು ಕಂಡುಬಂತು. ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಿಸಿಕೊಳ್ಳುವುದಕ್ಕಾಗಿ ಮತ್ತು ವಿವಿಧ ಪ್ರಮಾಣಪತ್ರಗಳನ್ನು ಪಡೆಯುವುದಕ್ಕಾಗಿ ಜನರು ಬಂದಿದ್ದರು.

ಬೀಜ, ರಸಗೊಬ್ಬರ ಹಾಗೂ ಕೃಷಿ ಸಂಬಂಧಿ ಮಳಿಗೆಗಳ ಎದುರು ರೈತರು ನೆರೆದಿದ್ದರು. ಮಧ್ಯಾಹ್ನದವರೆಗೂ ಖರೀದಿಗೆ ಅವಕಾಶ ನೀಡಿರುವುದನ್ನು ಕೃಷಿಕರಿಗೆ ಅನುಕೂಲವಾಗಿದ್ದು, ಕೃಷಿ ಯಂತ್ರಗಳ ದುರಸ್ತಿಗಾಗಿ ಈಗ ಬರುತ್ತಿದ್ದಾರೆ. ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರು ಮಳೆ ಬೀಳುವುದನ್ನು ಎದುರು ನೋಡುತ್ತಿದ್ದಾರೆ. ಅಗತ್ಯ ಬೀಜ, ರಸಗೊಬ್ಬರ ಖರೀದಿಸುವುದು ಮತ್ತು ಬಿತ್ತನೆಗೆ ಬೇಕಾಗುವ ಸಲಕರಣೆಗಳನ್ನು ಸಜ್ಜು ಮಾಡಿಕೊಳ್ಳುವುದಕ್ಕೆ ಹೆಚ್ಚು ಗಮನ ಹರಿಸಿದ್ದಾರೆ.

ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿರುವುದರಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಕಡೆಗೆ ಬರುತ್ತಿಲ್ಲ. ಕೋವಿಡ್‌ ನಿಯಮಗಳ ಪಾಲನೆ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಮಾಸ್ಕ್‌ ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.