ADVERTISEMENT

ಮತ ಎಣಿಕೆ ಕೇಂದ್ರದ ಸುತ್ತ ಬಿಕೋ ವಾತಾವರಣ

​ಪ್ರಜಾವಾಣಿ ವಾರ್ತೆ
Published 23 ಮೇ 2019, 16:03 IST
Last Updated 23 ಮೇ 2019, 16:03 IST
ರಾಯಚೂರಿನ ಮತ ಎಣಿಕೆ ಕೇಂದ್ರ ಎಲ್‌ವಿಡಿ ಕೇಂದ್ರದ ಬಳಿ ಬೆಂಬಲಿಗರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂತು
ರಾಯಚೂರಿನ ಮತ ಎಣಿಕೆ ಕೇಂದ್ರ ಎಲ್‌ವಿಡಿ ಕೇಂದ್ರದ ಬಳಿ ಬೆಂಬಲಿಗರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂತು   

ರಾಯಚೂರು: ನಗರದ ಎಲ್‌ವಿಡಿ ಹಾಗೂ ಎಸ್‌ಆರ್‌ಪಿಎಸ್‌ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಕ್ಷಣದಿಂದ ಕ್ಷಣಕ್ಕೆ ಕುತೂಹಲ ಹೆಚ್ಚಿಸುತ್ತಿದ್ದರೆ, ಮತ ಎಣಿಕೆ ಕೇಂದ್ರದ ಸುತ್ತಲೂ ಜನರಿಲ್ಲದೆ ಬಿಕೋ ಎನ್ನುವ ವಾತಾವರಣ ಕಂಡುಬಂತು.

ಈ ಹಿಂದಿನ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಜನಜಂಗುಳಿ ನಿರ್ಮಾಣವಾಗುತ್ತಿತ್ತು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದರು. ಕೆಲವೊಮ್ಮೆ ಲಘು ಲಾಠಿ ಪ್ರಹಾರವೂ ನಡೆಯುತ್ತಿತ್ತು. ಆದರೆ, ಈ ಬಾರಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಕಾಣುತ್ತಿತ್ತು.

ಬೆಳಿಗ್ಗೆ 8ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾದಾಗಿನಿಂದಲೂ ಮತ ಎಣಿಕೆ ಕೇಂದ್ರದ ಹೊರಗಡೆ ಜನರು ಇರಲಿಲ್ಲ. ಮತ ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರಿಂದ ಈ ರಸ್ತೆಯಲ್ಲಿ ಜನರ ಸಂಚಾರವು ವಿರಳವಾಗಿತ್ತು. ಎತ್ತ ಕಡೆ ನೋಡಿದರೂ ಪೊಲೀಸರೆ ಕಾಣುತ್ತಿದ್ದರು. ಪೊಲೀಸರ ವಾಹನಗಳೇ ಹೆಚ್ಚಾಗಿ ಸಂಚರಿಸಿದವು.

ADVERTISEMENT

ಮಧ್ಯಾಹ್ನದ ವೇಳೆಗೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚುತ್ತಾ ಸಾಗಿದಾಗ ಬಿಜೆಪಿ ಬೆಂಬಲಿಗರು ಮತ ಎಣಿಕೆ ಕೇಂದ್ರದ ಹತ್ತಿರ ಬರತೊಡಗಿದರು. 2ಗಂಟೆ ವೇಳೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಬೆಂಬಲಿಗರು ಗುಲಾಲ ಎರಚಿಕೊಂಡು ವಿಜಯೋತ್ಸವ ಆಚರಿಸಿದರು. ಬೆಂಬಲಿಗರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ.

ಎಲ್ಲಿ ನೋಡಿದರೂ ಪೊಲೀಸರು ಕಾಣಿಸುತ್ತಿದ್ದರು. ಮತ ಎಣಿಕೆ ಕೇಂದ್ರದಿಂದ ಅರ್ಧ ಕಿಲೋ ಮೀಟರ್ ದೂರದಲ್ಲೇ ಜನರು ಮತ್ತು ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬೇಸಿಗೆ ಬಿಸಿಲು ಹೆಚ್ಚಾಗಿತ್ತು. ಫಲಿತಾಂಶವನ್ನು ಟಿವಿ ವಾಹನಿಗಳಲ್ಲೇ ಜನರು ವೀಕ್ಷಣೆ ಮಾಡಿದರು. ಹೀಗಾಗಿ ಮತ ಎಣಿಕೆ ಕೇಂದ್ರದತ್ತ ಜನರು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.