ADVERTISEMENT

ಪ್ರಶ್ನೆ ಮಾಡದಂತಹ ಪರಿಸ್ಥಿತಿ ನಿರ್ಮಾಣ: ಹಳೆಮನೆ ರಾಜಶೇಖರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:43 IST
Last Updated 10 ಅಕ್ಟೋಬರ್ 2019, 12:43 IST
ರಾಯಚೂರಿನಲ್ಲಿ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಳೆಮನೆ ರಾಜಶೇಖರ ಮಾತನಾಡಿದರು
ರಾಯಚೂರಿನಲ್ಲಿ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಳೆಮನೆ ರಾಜಶೇಖರ ಮಾತನಾಡಿದರು   

ರಾಯಚೂರು: ದೇಶದಲ್ಲಿನ ರಾಜಕೀಯ ಕ್ಷೇತ್ರ ನೈತಿಕವಾಗಿಅಧಃಪತನವಾಗಿದ್ದರೂ, ಜನರು ಪ್ರಶ್ನೆ ಮಾಡದೇ ಹೋಗಲಿ ಬಿಡು ಎನ್ನುವಂತಹ ಪರಿಸ್ಥಿತಿಯನ್ನು ವಸಾಹತೋತ್ತರ ಸಂದರ್ಭದ ವ್ಯವಸ್ಥೆ ನಿರ್ಮಾಣ ಮಾಡಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಳೆಮನೆ ರಾಜಶೇಖರ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಗುರುವಾರ ಆಯೋಜಿಸಿದ್ದ ‘ವಸಾಹತೋತ್ತರ ಸಂದರ್ಭ ಗಾಂಧೀಜಿಯ ಪ್ರತಿರೋಧ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

1947ರ ಮುಂಚಿನ ಅವಧಿ ವಸಾಹತು ಕಾಲವಾಗಿದ್ದು,ಆ ನಂತರದಿಂದ 1990ರವರೆಗೆ ವಸಾಹೋತ್ತರ ಕಾಲ. 1947ರ ಮುಂಚೆ ಬ್ರಿಟಿಷರು ವಸಾಹತು ಶಾಹಿ ಆಡಳಿತವು ಅವಲಂಬಿತರನ್ನಾಗಿಸಿ ಗುಲಾಮರನ್ನಾಗಿ ಮಾಡಿತ್ತು.ಬ್ರಿಟಿಷರ ತತ್ವಗಳಿಗೆ ಸೈದ್ಧಾಂತಿಕ ಹಾಗೂ ಶೈಕ್ಷಣಿಕವಾಗಿ ಗಾಂಧೀಜಿಮೊದಲಿಗರಾಗಿ ಪ್ರತಿರೋಧ ಒಡ್ಡಿದ್ದರು ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಇಂದಿಗೂ ಗಾಂಧೀಜಿ ಪರ ಹಾಗೂ ವಿರುದ್ಧವಾಗಿ ಚರ್ಚೆಗಳು ಆಗುತ್ತಿದ್ದು, ಎರಡರಲ್ಲೂ ಗಾಂಧೀಜಿಯು ಶಕ್ತಿ ಕೇಂದ್ರವಾಗಿದ್ದಾರೆ. ಆದರೆ, ಗಾಂಧೀಜಿ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ.ಭಾರತದಲ್ಲಿನ ಬಡತನಕ್ಕೆ ಸಾಕ್ಷಾತ್ಕಾರದ ಸಂಕೇತವಾಗಿರುವ ಗಾಂಧೀಜಿ ಅವರ ಬಗ್ಗೆ ನಮ್ಮಲ್ಲಿರುವ ಗೊಂದಲಗಳನ್ನು ಬಗೆಹರಿಸಿಕೊಂಡಾಗ ಅವರು ಅರ್ಥವಾಗುತ್ತಾರೆ’ ಎಂದರು.

‘ಬ್ರಿಟಿಷರ ರೈಲು, ವೈದ್ಯರು ಹಾಗೂ ನ್ಯಾಯಾಲಯವನ್ನು ಪ್ರಮುಖವಾಗಿ ಗಾಂಧೀಜಿ ವಿರೋಧಿಸಿದ್ದರು. 1990ರ ನಂತರ ದೇಶದಲ್ಲಿ ಕೃಷಿ ಕ್ಷೇತ್ರ, ಸಣ್ಣ ಕೈಗಾರಿಕೆಗಳು ಹಾಗೂ ಶೈಕ್ಷಣಿಕ ವ್ಯವಸ್ಥೆ ನಾಶವಾಗಿದ್ದು ನಮಗೆ ನಾವೇ ಶತ್ರುಗಳಾಗಿದ್ದೇವೆ. ಆದರೆ, ಯಾರ ವಿರುದ್ಧ ಹೋರಾಡಬೇಕು ಎಂಬುದೇ ತಿಳಿಯದಂತಹ ಸ್ಥಿತಿಗೆ ಬಂದಿದ್ದೇವೆ. ಜಗತ್ತನ್ನೇ ಆಳುವಂತಹ ಕಾರ್ಪೋರೇಟ್‌ ಕಂಪೆನಿಗಳ ವಸ್ತುಗಳು ಮಾರು ಹೋಗಿ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದು ನುಡಿದರು.

’ಅಭಿವೃದ್ಧಿಯ ಕಲ್ಪನೆಯೇ ದೋಷದಿಂದ ಕೂಡಿದ್ದು,ಬೃಹತ್ ಕೈಗಾರಿಕೆಗಳು, ಹೆದ್ದಾರಿಗಳು ಹಾಗೂ ದೊಡ್ಡದಾದ ಕಟ್ಟಡಗಳು ನಿರ್ಮಾಣ ಮಾಡುವುದು ನಿಜವಾದ ಅಭಿವೃದ್ಧಿಯೇ ಅಲ್ಲ. ದುಡಿದ ಹಣವನ್ನೆಲ್ಲ ಶಾಪಿಂಗ್ ಮಾಲ್‌ಗಳಿಗೆ ಸುರಿದು ಖುಷಿ ಪಡುವಂತಾಗಿದ್ದು, ಭೋಗದ ವಸ್ತುಗಳನ್ನು ಪ್ರತಿಷ್ಠೆ ಎಂಬಂತೆ ಬಿಂಬಿಸಲಾಗುತ್ತಿದೆ. ದೇಶದ ಅಸ್ಮಿತೆ ನಾಶಮಾಡಿ ನಮ್ಮನ್ನುಆತ್ಮವಿಲ್ಲದ ದೇಹಗಳನ್ನಾಗಿ ಸೃಷ್ಟಿ ಮಾಡಲಾಗುತ್ತಿದೆ’ ಎಂದರು.

ಕಾಲೇಜಿನಪ್ರಾಚಾರ್ಯ ದಸ್ತಗೀರ್‌ ದಿನ್ನಿ ಮಾತನಾಡಿ, ಸಮಾಜಕ್ಕೆ ಅಂಟಿಕೊಂಡಿರುವ ಕೆಡುಕನ್ನು ಗಾಂಧೀಜಿ ಅವರ ಚಿಂತನೆಗಳಿಂದ ತಿಳಿಗೊಳಿಸಲು ಸಾಧ್ಯವಿದೆ. ಆದ್ದರಿಂದ ನಾವೆಲ್ಲರೂ ಗಾಂಧೀಜಿಯ ಚಿಂತನೆಗಳ ಕಡೆಗೆ ಸಾಗಬೇಕಿದೆ ಎಂದು ಹೇಳಿದರು.

150 ವರ್ಷಗಳಾದರೂ ಗಾಂಧೀಜಿ ಅವರ ಚಿಂತನೆಗಳು ವಿಶ್ವದ ಮೇಲೆ ಪ್ರಭಾವ ಬೀರುತ್ತಿವೆ. ಅವರ ಚಿಂತನೆಗಳು ಅಷ್ಟೊಂದು ಶಕ್ತಿಶಾಲಿಯಾಗಿವೆ. ಆದ್ದರಿಂದ, ಗಾಂಧೀಜಿ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಸದೃಢಗೊಳಿಸಬೇಕು ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಶಿವಯ್ಯ ಹಿರೇಮಠ, ಮಹಾದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.