ADVERTISEMENT

ಈಡೇರದ ಸೇತುವೆ ನಿರ್ಮಾಣ ಭರವಸೆ: ಕಡದರಗಡ್ಡಿ ಗ್ರಾಮಸ್ಥರ ಆಕ್ರೋಶ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜೂನ್ 2021, 6:27 IST
Last Updated 16 ಜೂನ್ 2021, 6:27 IST
ಲಿಂಗಸುಗೂರು ತಾಲ್ಲೂಕು ನಡುಗಡ್ಡೆ ಜನತೆ ಕಡದರಗಡ್ಡಿ ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಬಳಸಿ ನಿತ್ಯದ ಕೆಲಸ ಕಾರ್ಯಗಳಿಗೆ ಸಂಪರ್ಕ ಸಾಧಿಸುವುದು ಸಾಮಾನ್ಯ
ಲಿಂಗಸುಗೂರು ತಾಲ್ಲೂಕು ನಡುಗಡ್ಡೆ ಜನತೆ ಕಡದರಗಡ್ಡಿ ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಬಳಸಿ ನಿತ್ಯದ ಕೆಲಸ ಕಾರ್ಯಗಳಿಗೆ ಸಂಪರ್ಕ ಸಾಧಿಸುವುದು ಸಾಮಾನ್ಯ   

ಲಿಂಗಸುಗೂರು: ಕೃಷ್ಣಾ ನದಿಗೆ ಅಡ್ಡಲಾಗಿ ಗೋನವಾಟ್ಲ ಮತ್ತು ಕಡದರಗಡ್ಡಿ ಮಧ್ಯೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಭರವಸೆ ನೀಡುತ್ತ ಬಂದಿದ್ದರೂ ಈವರೆಗೂ ಅದು ಈಡೇರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹4 ಕೋಟಿ ಸೇತುವೆ ನಿರ್ಮಾಣಕ್ಕೆ ಮಂಜೂರಾಗಿತ್ತು. ಭೂಮಿಪೂಜೆಗೂ ಸಿದ್ಧತೆ ನಡೆಸಲಾಗಿತ್ತು. ಆದರೆ, ಸೇತುವೆ ನಿರ್ಮಾಣಕ್ಕೆ ಮಂಜೂರಾದ ಹಣವನ್ನು ಅನ್ಯ ಕಾಮಗಾರಿಗಳಿಗೆ ವರ್ಗಾಯಿಸಿರುವುದು ಕಡದರಗಡ್ಡಿ ಜನರಲ್ಲಿ ಅಸಮಾಧಾನ ಮೂಡಿಸಿದೆ.

ಸೇತುವೆ ನಿರ್ಮಾಣ ಆಗಿದ್ದರೆ ಕೃಷ್ಣಾ ನದಿ ಮಧ್ಯಭಾಗದ ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಹಂಚಿನಾಳ, ಕರಕಲಗಡ್ಡಿ, ವಂಕಂನಗಡ್ಡಿ, ಮ್ಯಾದರಗಡ್ಡಿ ಪ್ರದೇಶದ ಜನತೆಗೆ ತಾಲ್ಲೂಕು ಕೇಂದ್ರಕ್ಕೆ ಬಂದುಹೋಗಲು ಹಾಗೂ ಗುಂತಗೋಳ ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಲಿನ ಗ್ರಾಮಗಳ ಸಂಪರ್ಕಕ್ಕೆ ಹೆಚ್ಚು ಅನುಕೂಲ ಆಗುತ್ತಿತ್ತು.

ADVERTISEMENT

ವಿಧಾನಸಭೆ, ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ಗ್ರಾಮಸ್ಥರು ಸೇತುವೆ ನಿರ್ಮಾಣ ಮಾಡುವಂತೆ ಮತದಾನ ಬಹಿಷ್ಕರಿಸಿದ್ದರಿಂದ ಲೋಕೋಪಯೋಗಿ ಇಲಾಖೆಯಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ಮಂಜೂರಾತಿ ಮಾಡಲಾಗಿತ್ತು.

ಸದ್ಯ ಹಣವು ಅನುದಾನವೂ ಇಲ್ಲ, ಸೇತುವೆಯೂ ನಿರ್ಮಾಣವಾಗಿಲ್ಲ. ಲೋಕೋಪಯೋಗಿ, ಭೂಸೇನಾ ನಿಗಮ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆ ನಿರ್ಮಾಣಗೊಂಡರೆ ಕೇವಲ 14 ಕಿ.ಮೀ ಅಂತರದಲ್ಲಿ ತಾಲ್ಲೂಕು ಕೇಂದ್ರ ತಲಪುತ್ತೇವೆ. ಇಲ್ಲದೆ ಹೋದಲ್ಲಿ ಸುತ್ತುವರಿದು 40 ರಿಂದ 45 ಕಿ.ಮೀ ಪ್ರಯಾಣ ಮಾಡಬೇಕು.ಸೇತುವೆ ನಿರ್ಮಾಣಗೊಂಡರೆ ವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗೂ ಪಂಚಾಯಿತಿ ಕೆಲಸಗಳಿಗೆ ಹೋಗುವವರಿಗೆ ಅನುಕೂಲವಾಗುತ್ತದೆ.

ಕೃಷ್ಣಾ ಪ್ರವಾಹ ಬಂದಾಗೊಮ್ಮೆ ರಕ್ಷಣೆ ಹೆಸರಲ್ಲಿ ಕೋಟ್ಯಂತರ ಹಣ ಖರ್ಚು ಮಾಡುತ್ತಿರುವ ಅಧಿಕಾರಿಗಳು, ಪ್ರತಿನಿಧಿಗಳು ನಡುಗಡ್ಡೆ ಜನರ ಶಾಶ್ವತ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸೇತುವೆ ನಿರ್ಮಾಣಕ್ಕೆ ಮುಂದಾಗದೆ ಹೋದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನಡುಗಡ್ಡೆ ಜನತೆ ಸಾಮೂಹಿಕವಾಗಿ
ಎಚ್ಚರಿಕೆ ನೀಡಿದ್ದಾರೆ.

–ಈ ಮುಂಚೆ ಕಡದರಗಡ್ಡಿ ಸೇತುವೆಗೆ ₹4 ಕೋಟಿ ಮಂಜೂರು ಆಗಿತ್ತು. ಅದನ್ನು ಅನ್ಯ ಕೆಲಸಕ್ಕೆ ವರ್ಗಾಯಿಸಿದ್ದಾರೆ ಎಂಬ ಮಾಹಿತಿ ಸಿಬ್ಬಂದಿಯಿಂದ ತಿಳಿದು ಬಂದಿದೆ. ನಾನು ಹೊಸದಾಗಿ ಬಂದಿದ್ದು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಜಗದೇವ ಮೊತಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.