ADVERTISEMENT

ಸಿಂಧನೂರು: ಗುತ್ತಿಗೆದಾರ ಕಂಪನಿ ಕಪ್ಪುಪಟ್ಟಿಗೆ ಸೇರಿಸಲು ಸೂಚನೆ

ತಿಮ್ಮಾಪುರ ಏತನೀರಾವರಿ ಕಾಮಗಾರಿ ಸ್ಥಳಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 5:32 IST
Last Updated 12 ಫೆಬ್ರುವರಿ 2023, 5:32 IST
ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಸಮೀಪ ನಡೆಯುತ್ತಿರುವ ತಿಮ್ಮಾಪುರ ಏತನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಶನಿವಾರ ಭೇಟಿ ನೀಡಿ ವೀಕ್ಷಿಸಿ, ಅಧಿಕಾರಿಗಳ ಜತೆ ಚರ್ಚಿಸಿದರು
ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಸಮೀಪ ನಡೆಯುತ್ತಿರುವ ತಿಮ್ಮಾಪುರ ಏತನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಶನಿವಾರ ಭೇಟಿ ನೀಡಿ ವೀಕ್ಷಿಸಿ, ಅಧಿಕಾರಿಗಳ ಜತೆ ಚರ್ಚಿಸಿದರು   

ಸಿಂಧನೂರು: ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಸಮೀಪದ ನಡೆಯುತ್ತಿರುವ ತಿಮ್ಮಾಪುರ ಏತನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶನಿವಾರ ಶಾಸಕ ವೆಂಕಟರಾವ್ ನಾಡಗೌಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕಾಮಗಾರಿ ಗುತ್ತಿಗೆ ಪಡೆದ ಮಂಗಳೂರಿನ ಓಸಿಯನ್ ಕನ್‍ಸ್ಟ್ರಕ್ಷನ್ಸ್ ಸಿಬ್ಬಂದಿ ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗದ ಇಇ, ಎಇಇ, ಜೆಇ ಮತ್ತು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

‘18 ತಿಂಗಳಲ್ಲಿ ಕಾಮಗಾರಿ ಪೂರ್ಣಸಲು ಕಾಲಾವಧಿ ನಿಗದಿ ಪಡಿಸಲಾಗಿತ್ತು. ಆದರೆ ನಾಲ್ಕೂವರೆ ವರ್ಷಗಳಾದರೂ ಕೆಲಸ ಮುಗಿದಿಲ್ಲ. ಈಗಾಗಲೇ ಸರ್ಕಾರದಿಂದ ₹ 70 ಕೋಟಿ ಅನುದಾನ ಬಿಡುಗಡೆಗೊಂಡಿದ್ದರೂ ತ್ವರಿತಗತಿಯಲ್ಲಿ ಕೆಲಸ ಮಾಡದೆ ನಿಷ್ಕಾಳಜಿ ತೋರುತ್ತಿರುವುದೇಕೆ? ಇನ್ನೆಷ್ಟು ವರ್ಷ ಬೇಕು ಕೆಲಸ ಮುಗಿಸೋಕೆ? ಎಂದು ಓಸಿಯನ್ ಕನ್‍ಸ್ಟ್ರಕ್ಷನ್ಸ್ ಜೆಇ ಅಜರ್ ವಿರುದ್ಧ ಕಿಡಿಕಾರಿದರು.

ADVERTISEMENT

ಈ ವೇಳೆ ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ನಾಡಗೌಡ, ‘ತಿಮ್ಮಾಪುರ ಏತ ನೀರಾವರಿ ಕೆಲಸವನ್ನು ಗುತ್ತಿಗೆ ಕಂಪನಿ ಸರಿಯಾಗಿ ಮಾಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಪವರ್ ಸ್ಟೇಶನ್ ಆಗಿಲ್ಲ. ವಿದ್ಯುತ್‌ ಕೆಲಸ ಆಗಿಲ್ಲ. ಇಲ್ಲಿಗೆ ನಾಲ್ಕೂವರೆ ವರ್ಷವಾಯಿತು. ಹೀಗಾದರೆ ಯಾವಾಗ ಉದ್ಘಾಟನೆ ಮಾಡೋದು, ಯಾವಾಗ ಕೆಳಭಾಗದ ರೈತರ ಜಮೀನುಗಳಿಗೆ ನೀರು ಕೊಡೋದು. ಈ ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕ್ರಮ ಜರುಗಿಸಬೇಕು’ ಎಂದು ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಮಾರು 35 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ತಿಮ್ಮಾಪುರ ಏತನೀರಾವರಿ ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ₹ 98 ಕೋಟಿ ಅನುದಾನ ಸರ್ಕಾರ ನೀಡಿದೆ. 18 ತಿಂಗಳ ಕಾಲಾವಧಿ ಮುಗಿದು ನಾಲ್ಕೂವರೆ ವರ್ಷವಾದರೂ ಕೆಲಸ ಪೂರ್ಣಗೊಂಡಿಲ್ಲ. ಹೆಚ್ಚುವರಿ ಕಾಲಾವಧಿಯನ್ನು ತೆಗೆದುಕೊಂಡಿಲ್ಲ. ಹೀಗಾಗಿ ಕಪ್ಪುಪಟ್ಟಿಗೆ ಹಾಕಿ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಲಾ ಗುವುದು ಎಂದು ಹೇಳಿದರು.

ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸತ್ಯನಾರಾಯಣ ಶೆಟ್ಟಿ, ಸಹಾಯಕ ಕಾರ್ಯಪಾಲಕ ಎಂಜನಿಯರ್ ದಾವೂದ್, ರಾಮರೆಡ್ಡಿ, ರಘುರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.