ADVERTISEMENT

ಮುಖ್ಯ ಶಿಕ್ಷಕ ವರ್ಗಾವಣೆಗೆ ಆಕ್ಷೇಪ

ನ.23ರಂದು ಬೀಗ ಹಾಕಿ ಪ್ರತಿಭಟಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 16:18 IST
Last Updated 21 ನವೆಂಬರ್ 2020, 16:18 IST
ಶ್ರೀಶೈಲಗೌಡ
ಶ್ರೀಶೈಲಗೌಡ   

ಮಾನ್ವಿ: ತಾಲ್ಲೂಕಿನ ತಡಕಲ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮಕ್ಕೆ ಶಾಲೆಯ ಎಸ್‍ಡಿಎಂಸಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಎಸ್‍ಡಿಎಂಸಿ ಅಧ್ಯಕ್ಷ ಶ್ರೀಶೈಲಗೌಡ, ‘ಮಹರ್ಷಿ ವಾಲ್ಮೀಕಿ ದಿನಾಚರಣೆಯಂದು ನಡೆದಿದ್ದ ಆಕಸ್ಮಿಕ ಘಟನೆ ಬಗ್ಗೆ ನೀಡಲಾದ ದೂರಿನನ್ವಯ ಮುಖ್ಯ ಶಿಕ್ಷಕರನ್ನು ತಾತ್ಕಾಲಿಕ ನಿಯೋಜನೆ ಆಧಾರದಲ್ಲಿ ಬೇರೆ ಶಾಲೆಗೆ ವರ್ಗಾಯಿಸಲಾಗಿದೆ. ಸದರಿ ಘಟನೆಯಲ್ಲಿ ಮುಖ್ಯ ಶಿಕ್ಷಕರು ಯಾವುದೇ ತಪ್ಪು ಮಾಡಿಲ್ಲ ಎಂದು ಮಕ್ಕಳ ಪಾಲಕರು ಹಾಗೂ ಎಸ್‍ಡಿ ಎಂಸಿ ಪದಾಧಿಕರಿಗಳು ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಾಲ್ಕೈದು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ, ಕಟ್ಟಡ, ಮೂಲಸೌಕರ್ಯ ಸೇರಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಈಗ ಏಕಾಏಕಿ ಮುಖ್ಯ ಶಿಕ್ಷಕರ ವರ್ಗಾವಣೆಗೆ ಮುಂದಾಗಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ಎಲ್ಲಾ ಎಸ್‍ಡಿಎಂಸಿ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಲು ನಿರ್ಧರಿಸಲಾಗಿದೆ. ಮುಖ್ಯ ಶಿಕ್ಷಕರ ವರ್ಗಾವಣೆ ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.23 ಸೋಮವಾರದಂದು ಗ್ರಾಮಸ್ಥರಿಂದ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

ಎಸ್‍ಡಿಎಂಸಿ ಸದಸ್ಯರಾದ ಲಕ್ಷ್ಮೀಪತಿಗೌಡ, ವೆಂಕೋಬ ನಾಯಕ, ಅಮರೇಶ, ಲಿಂಗಪ್ಪ ಹಾಗೂ ಸೂಗುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.