ADVERTISEMENT

ಎಣ್ಣೆ ಉತ್ಪನ್ನಗಳಿಗೆ ಉತ್ತೇಜನ ಅಗತ್ಯ: ಕೆಒಎಫ್ ಎಂಡಿ ಗೋಪಾಲ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:05 IST
Last Updated 17 ಡಿಸೆಂಬರ್ 2025, 7:05 IST
ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ಸಹಯೋಗದಲ್ಲಿ ಎನ್‍ಎಂಇಒಎಸ್ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರಿಗೆ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎಚ್.ಎಸ್. ಉದ್ಘಾಟಿಸಿದರು 
ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ಸಹಯೋಗದಲ್ಲಿ ಎನ್‍ಎಂಇಒಎಸ್ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರಿಗೆ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎಚ್.ಎಸ್. ಉದ್ಘಾಟಿಸಿದರು    

ಸಿಂಧನೂರು: ‘ಪ್ರಸ್ತುತ ದಿನಗಳಲ್ಲಿ ಎಣ್ಣೆ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ಸಹಕಾರಿಯಾಗಲಿದೆ’ ಎಂದು ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎಚ್.ಎಸ್.ಅಭಿಪ್ರಾಯಪಟ್ಟರು.

ಸ್ಥಳೀಯ ಜೈನ್ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ಸಹಯೋಗದಲ್ಲಿ ಎನ್‍ಎಂಇಒಎಸ್ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‌‘ಎಣ್ಣೆ ಬೀಜಗಳು ಭಾರತದ ಕೃಷಿ ಪರಂಪರೆಯ ಬೆನ್ನೆಲುಬಾಗಿದೆ. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಸಾಂಸ್ಕೃತಿಕ ಪರಂಪರೆಗೆ ವಿಶೇಷ ಕೊಡುಗೆ ನೀಡುತ್ತದೆ. ಗುಣಮಟ್ಟದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಅಧಿಕವಿದೆ. ಆದ್ದರಿಂದ ರೈತರು ಇದರತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ್ ಮಾತನಾಡಿ, ‘ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪನ್ನ ಕೊರತೆಯನ್ನು ಸರಿದೂಗಿಸಲು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ರೈತರಿಗೆ ಎಣ್ಣೆಕಾಳು ಬೆಳೆಗಳ ನಿರ್ವಹಣೆ ಕುರಿತು ಕಾರ್ಯಾಗಾರ ಆಯೋಜಿಸಿ ಸಮಗ್ರ ಮಾಹಿತಿ ನೀಡಲಾಗುತ್ತಿದೆ’ ಎಂದರು.

‘ಆರೋಗ್ಯಯುತ ಮಣ್ಣಿನ ಮೌಲ್ಯ 0.7ಕ್ಕಿಂತ ಕಡಿಮೆ ಇರಬಾರದು. ಹೆಚ್ಚೂ ಆಗಬಾರದು. ಮನುಷ್ಯರಿಗೆ ಬಿಪಿ, ಶುಗರ್ ಇದ್ದಂತೆ. ಮಣ್ಣು ಆರೋಗ್ಯಕರವಾಗಿದ್ದಾಗ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಭೂಮಿ ಗುಣಧರ್ಮದ ಆಧಾರದಲ್ಲಿ ಬೆಳೆಯ ಇಳುವರಿ ಬರುತ್ತದೆ’ ಎಂದರು.

ಸಿಂಧನೂರು ಕೃಷಿಕ ಸಮಾಜದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ದೊರೆತಾಗ ಮಾತ್ರ ರೈತರು ಪ್ರಗತಿ ಹೊಂದಲು ಸಾಧ್ಯ’ ಎಂದರು.

ಬೀಜ, ರಸಗೊಬ್ಬರ ಮಾರಾಟಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣಭೀಮನಗೌಡ ಗೊರೇಬಾಳ, ಜಿಲ್ಲಾ ಉಪ ಕೃಷಿ ನಿರ್ದೇಶಕ ನಹೀಮ್‍ಹುಸೇನ್, ಮುತ್ತುರಾಜ್, ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಬಸವಣ್ಣೆಪ್ಪ, ಬೇಸಾಯ ಶಾಸ್ತ್ರಜ್ಞ ಉಮೇಶ, ಮಣ್ಣು ವಿಜ್ಞಾನಿ ಶ್ರೀನಿವಾಸ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ, ಅಧಿಕಾರಿ ಮಲ್ಲಿಕಾರ್ಜುನ ನಾಗರಾಳ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.