ರಾಯಚೂರು: ಜಿಲ್ಲಾಧಿಕಾರಿ ನಿತೀಶ್ ಕೆ. ಜುಲೈ 16ರಂದು ನಗರದಲ್ಲಿನ ಒಪೆಕ್ ಆಸ್ಪತ್ರೆ ಟ್ರಾಮಾ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದರು.
‘ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಟ್ಟಡ ನಿರ್ಮಾಣ ಕಾಮಗಾರಿಯ ವೇಗಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ವಿಶೇಷ ತಜ್ಞ ವೈದ್ಯರ ಜೊತೆಗೆ ಜಿಲ್ಲಾಧಿಕಾರಿಳು ಚರ್ಚೆ ನಡೆಸಿದರು.
ಇಲ್ಲಿಗೆ ಬರುವ ರೋಗಿಗಳಿಗೆ ಗುಣಮಟ್ಟದ ರೀತಿಯಲ್ಲಿ ಚಿಕಿತ್ಸೆ ಸಿಗಬೇಕು. ಜನರಿಗೆ ಎಲ್ಲ ರೀತಿಯಲ್ಲಿ ಅನುಕೂಲವಾಗುವ ಹಾಗೆ ಹೊಸ ವಿಭಾಗಗಳನ್ನು ಸಹ ಆರಂಭಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಹೃದ್ರೋಗ ವಿಭಾಗ ಬಲಪಡಿಸಿ: ಇದೀಗ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಹೀಗಾಗಿ ಜನತೆಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುವಂತೆ ಒಪೆಕ್ ಆಸ್ಪತ್ರೆಯಲ್ಲಿನ ಹೃದ್ರೋಗ ವಿಭಾಗವನ್ನು ಬಲಪಡಿಸಲು ಕ್ರಮವಹಿಸಬೇಕು ಎಂದು ಡಾ.ಗೋಪಿನಾಥ ಅವರಿಗೆ ಸೂಚನೆ ನೀಡಿದರು.
ಒಪೆಕ್ ಆಸ್ಪತ್ರೆಯಲ್ಲಿ ಉತ್ತಮವಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ ಎಂಬುದರ ಬಗ್ಗೆ ಜನತೆಗೆ ಮಾಹಿತಿ ರವಾನೆಯಾಗಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಸಂದರ್ಭದಲ್ಲಿ ಸರ್ಕಾರಿ ಅಥವಾ ಖಾಸಗಿ ವೈದ್ಯರು ರೋಗಿಯನ್ನು ಒಪೆಕ್ ಆಸ್ಪತ್ರೆಗೆ ಹೋಗುವಂತೆ ಸಲಹೆ ಮಾಡಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಹೊರಾಂಗಣದಲ್ಲಿ ಸಂಚರಿಸಿ ಆಸ್ಪತ್ರೆಯ ಉದ್ಯಾನ ವೀಕ್ಷಣೆ ನಡೆಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ವಿಶ್ರಾಂತಿಗೆ ಅನುಕೂಲವಾಗುವಂತೆ ಕೂಡಲು ಅಲ್ಲಲ್ಲಿ ಸಿಮೆಂಟ್ ಬೆಂಚ್ ಅಳವಡಿಸಿ ಉದ್ಯಾನವನವನ್ನು ಅಚ್ಚುಕಟ್ಟಾಗಿ ನಿರ್ಮಿಸಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಒಪೆಕ್ ಆಸ್ಪತ್ರೆಯ ನಿರ್ದೇಶಕ ಡಾ.ರಮೇಶ ಬಿ ಎಚ್, ವಿಶೇಷ ಅಧಿಕಾರಿ ಡಾ.ರಮೇಶ ಸಿ ಸಾಗರ, ಒಪೆಕ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ನೀಲಪ್ರಭಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯಶಂಕರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.