ಪಿಜ್ಜಾ
ರಾಯಚೂರು: ಗ್ರಾಹಕನಿಗೆ ಸಕಾಲದಲ್ಲಿ ಪಿಜ್ಜಾ ತಲುಪಿಸದೇ ಹಣ ಸ್ವೀಕರಿಸಿದ ಸಂದೇಶ ಕಳುಹಿಸಿ ಮಾನಸಿಕ ವ್ಯಥೆ ಉಂಟು ಮಾಡಿದ ಕಾರಣಕ್ಕೆ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎರಡು ಕಂಪನಿಗಳಿಗೆ ₹ 40 ಸಾವಿರ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ವಕೀಲೆ ವಿದ್ಯಾಶ್ರೀ ಅವರು 2024ರ ಮಾರ್ಚ್ 17ರಂದು ಸಂಜೆ 7 ಗಂಟೆಗೆ ಜೊಮ್ಯಾಟೊ ಮೂಲಕ ಡಾಮಿನೋಸ್ ಪಿಜ್ಜಾ ಕಳುಹಿಸಿಕೊಡುವಂತೆ ₹ 337.45 ಪಾವತಿಸಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ರಾತ್ರಿ 9 ಗಂಟೆಯಾದರೂ ಜೊಮ್ಯಾಟೊದವರು ಸರಬರಾಜು ಮಾಡಿರಲಿಲ್ಲ. ಫೋನ್ ಮಾಡಿ ವಿಚಾರಿಸಿದಾಗ, ಪಿಜ್ಜಾ ಸಿದ್ಧಪಡಿಸುತ್ತಿದ್ದು, ಕಳುಹಿಸುವುದಾಗಿ ಹೇಳಿದರೂ ಕಳುಹಿಸಿಕೊಡಲಿಲ್ಲ. ಆದರೆ, ನಂತರ ಸರಬರಾಜು ಮಾಡದಿದ್ದರೂ ಹಣ ಸ್ವೀಕರಿಸಿದ ಸಂದೇಶ ಮೊಬೈಲ್‌ಗೆ ಬಂದಿದೆ. ಹೀಗಾಗಿ ಮತ್ತೆ ಫೋನ್ ಮಾಡಿ ವಿಚಾರಿಸಿದರೂ ಕಂಪನಿಯಿಂದ ಸರಿಯಾದ ಉತ್ತರ ದೊರಕಿರಲಿಲ್ಲ.
ಫಿರ್ಯಾದಿದಾರರು ಸೇವಾ ನೂನ್ಯತೆಯಿಂದ ಉಂಟಾದ ಮಾನಸಿಕ ವ್ಯಥೆಗೆ ಪರಿಹಾರ ಕೊಡುವಂತೆ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಆಯೋಗವು ರಾಯಚೂರು ಜೊಮ್ಯಾಟೊ ಹಾಗೂ ಬೆಂಗಳೂರಿನ ಡಾಮಿನೋಸ್‌ಗೆ ನೋಟಿಸ್ ಕಳುಹಿಸಿದ್ದರೂ ಆಯೋಗದ ಮುಂದೆ ಹಾಜರಾಗಿರಲಿಲ್ಲ.
ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರಕುಮಾರ ಹಾಗೂ ಸದಸ್ಯ ಪ್ರಭುದೇವ ಪಾಟೀಲ ಅವರು ಫಿರ್ಯಾದಿದಾರರ ಸಾಕ್ಷಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಜೊಮ್ಯಾಟೊ ಹಾಗೂ ಡಾಮಿನೋಸ್‌ಗೆ ಜಂಟಿಯಾಗಿ ₹ 40 ಸಾವಿರ ಪರಿಹಾರ ಪಾವತಿಸಬೇಕು ಎಂದು ಆದೇಶ ನೀಡಿದ್ದಾರೆ ಎಂದು ಜಿಲ್ಲಾ ಆಯೋಗದ ಸಹಾಯಕ ರಿಜಿಸ್ಟ್ರಾರ್ ಅಣ್ಣಾರಾವ್ ಹಾಬಾಳಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.