ಸಿಂಧನೂರು: ‘ಕೊರಮ, ಕೊರಚ, ಕೊರವ, ಕುಳುವ ಸಮುದಾಯಗಳ ಭಾಷೆ, ಶ್ರಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅಸ್ಮಿತೆಯನ್ನು ರಕ್ಷಿಸುವ ಕೆಲಸ ನಮ್ಮೆಲ್ಲರ ಜತೆಗೆ ಸರ್ಕಾರದಿಂದಲೂ ಆಗಬೇಕಿದೆ’ ಎಂದು ಎಸ್‍ಸಿ-ಎಸ್‍ಟಿ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಮಾರುಕಟ್ಟೆಯ ಆವರಣದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ತಾಲ್ಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಷ್ಠಾಪಿಸಲ್ಪಟ್ಟ ನುಲಿಯ ಚಂದಯ್ಯನ ಕಂಚಿನ ಪ್ರತಿಮೆ ಅನಾವರಣ ಹಾಗೂ 918ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೀಸಲಾತಿ ಹೆಸರಿನಲ್ಲಿ ಅಲೆಮಾರಿ ಸಮುದಾಯದ ಒಗ್ಗಟ್ಟನ್ನು ಒಡೆಯುವ ಹುನ್ನಾರವನ್ನು ದೊಡ್ಡ ದೊಡ್ಡ ನಾಯಕರು ನಡೆಸಿ, ಜನಾಂಗದವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜತೆ ತಮ್ಮ ಏಜೆಂಟ್‍ರನ್ನು ಬಿಟ್ಟು ತಾವು ಹೋದಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ ತಾವು ಇದಕ್ಕೆಲ್ಲ ಹೆದರಲ್ಲ, ಕೇರ್ ಮಾಡಲ್ಲ’ ಎಂದು ಹೇಳಿದರು.
‘ಎರಡು ವರ್ಷಗಳಲ್ಲಿ 27 ಜಿಲ್ಲೆ, 102 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಇನ್ನೂ ನಾಲ್ಕೈದು ಜಿಲ್ಲೆಗಳಲ್ಲೂ ಪ್ರವಾಸಿ ಮಾಡಿ ಶೋಷಿತ, ಅವಕಾಶ ವಂಚಿತ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಹುಬ್ಬಳ್ಳಿಯ ಸಾಹಿತಿ ಡಾ.ವೈ.ಎಂ.ಭಜಂತ್ರಿ ಮಾತನಾಡಿ, ‘ಕುಳುವ ಭಾಷೆ ಆಡುವ ಎಲ್ಲಾ ಸಮುದಾಯಗಳು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿವೆ. ರಾಜಕಾರಣಿಗಳು ಈ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡದೆ ಅನ್ಯಾಯ ಮಾಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕಂಚಿನ ಮೂರ್ತಿ ಅನಾವರಣ ಮಾಡಿದದರು. ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ನೀಲಕಂಠಪ್ಪ ಮಸ್ಕಿ ಮಾತನಾಡಿದರು. ರಂಭಾಪುರಿ ಖಾಸಾಶಾಖಾಮಠದ ಸೋಮನಾಥ ಶಿವಾಚಾರ್ಯರು, ಇರಕಲ್ ಶಿವಶಕ್ತಿ ಪೀಠದ ಬಸವ ಪ್ರಸಾದ ಮಹಾಸ್ವಾಮೀಜಿ ಮತ್ತು ಆದಯ್ಯಸ್ವಾಮಿ ಗೂಗೇಬಾಳ ಸಾನ್ನಿಧ್ಯ ವಹಿಸಿದ್ದರು. ಕುಳುವ ಮಹಾಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಘಟಕದ ಗೌರವಾಧ್ಯಕ್ಷ ಜಿ.ಚಂದ್ರಣ್ಣ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮರಿಯಪ್ಪ ತುರಡಗಿ, ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ, ಮುಖಂಡರಾದ ಗಂಗಣ್ಣ ಡಿಶ್, ಸುರೇಶ ಹಚ್ಚೊಳ್ಳಿ, ಹನುಮಂತ ಭಜಂತ್ರಿ, ಬಸವರಾಜ ಮಾನ್ವಿ, ರಾಮಣ್ಣ ದೇವದುರ್ಗ, ಯಂಕಪ್ಪ ಸಿರವಾರ, ಯಂಕಪ್ಪ ಭಜಂತ್ರಿ ಮಸ್ಕಿ, ನರಸಿಂಹಲು ರಾಯಚೂರು, ಸಿದ್ರಾಮೇಶ ಮನ್ನಾಪುರ, ನಾರಾಯಣಪ್ಪ ಮಾಡಶಿರವಾರ, ಕೃಷ್ಣಪ್ಪ ಚಿತ್ರದುರ್ಗ, ಲಕ್ಷ್ಮಣ ಕೊಪ್ಪಳ, ಕೆ.ರಾಜಶೇಖರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಾ, ಬಿ.ಎಸ್.ಭಜಂತ್ರಿ ಧಾರವಾಡ, ರಾಮಣ್ಣ ಚಿತ್ರದುರ್ಗ ಉಪಸ್ಥಿತರಿದ್ದರು.
ಕೊರಮ ಕೊರಚ ಕೊರವ ಕುಂಚಿಕೊರವ ಸಮುದಾಯಗಳನ್ನು ರಾಜಕಾರಣಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ರಾಜಕೀಯ ಶಕ್ತಿಯಾಗಿ ಬೆಳೆಯಬೇಕಾದ ಅವಶ್ಯಕತೆ ಇದೆವೈ.ಎಂ.ಭಜಂತ್ರಿ ಸಾಹಿತಿ ಹುಬ್ಬಳ್ಳಿ
ಗೈರು ಹಾಜರಾದ ಶಾಸಕರ ಬಗ್ಗೆ ಅಸಮಾಧಾನ
ನುಲಿಯ ಚಂದಯ್ಯನವರ ಕಂಚಿನ ಮೂರ್ತಿ ಉದ್ಘಾಟನೆ ಮತ್ತು ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾದ ಶಾಸಕ ಹಂಪನಗೌಡ ಬಾದರ್ಲಿ ಅವರ ಬಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ಅತಿಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ನಿರ್ಲಕ್ಷಿತ ಸಮುದಾಯದ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆಯಬೇಕಾಗಿತ್ತು. ಆದರೆ ಅವರು ಹಾಜರಾಗಿಲ್ಲವೆಂದು ಕುಳುವ ಸಮಾಜದ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.