ADVERTISEMENT

‘ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ’–ಬಸವ ಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 13:25 IST
Last Updated 4 ಏಪ್ರಿಲ್ 2021, 13:25 IST
ಲಿಂಗಸುಗೂರಲ್ಲಿ ಶುಕ್ರವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾರಂಭವನ್ನು ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು
ಲಿಂಗಸುಗೂರಲ್ಲಿ ಶುಕ್ರವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾರಂಭವನ್ನು ಕೂಡಲಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು   

ಲಿಂಗಸುಗೂರು: ‘ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ ನಡೆಸಲಾಯಿತು’ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶುಕ್ರವಾರ ಶರಣು ಶರಣಾರ್ಥಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಸಮುದಾಯದ ಅಭಿವೃದ್ಧಿಗಾಗಿ ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆ, ಉಪವಾಸ ಮತ್ತು ಧರಣಿ ಸತ್ಯಾಗ್ರಹ ನಡೆಸುವ ಅನಿವಾರ್ಯತೆ ಎದುರಾಗಿದೆ. ಆರು ತಿಂಗಳು ಸಮಯ ನೀಡಿದೆ. ಮೀಸಲಾತಿ ಘೋಷಣೆ ಮಾಡದಿದ್ದರೆ 20 ಲಕ್ಷ ಪಂಚಮಸಾಲಿಗಳ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು‘ ಎಂದರು.

ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‍ ಮಾತನಾಡಿ, ‘ಸಮುದಾಯ ಹೋರಾಟದ ಬಗ್ಗೆ ಅನಗತ್ಯ ಆರೋಪ ಮಾಡುವ ಸಚಿವರು, ಶಾಸಕರು ಮೌನವಾಗಬೇಕು. ಇಲ್ಲದೆ ಹೋದಲ್ಲಿ ಅಂಥವರ ಮನೆಗಳ ಮುಂದೆ ಸ್ವಾಮೀಜಿಯ ನೇತೃತ್ವದಲ್ಲಿ ಧರಣಿ ನಡೆಸಲು ಸಿದ್ಧರಾಗಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪಂಚಸೇನೆ ರಾಜ್ಯ ಘಟಕ ಅಧ್ಯಕ್ಷ ಬಸನಗೌಡ ನಾಗರಹಾಳ, ಲಿಂಗಾಯತ ಪಂಚಮಸಾಲಿ ರೈತ ಮೋರ್ಚಾ ಅಧ್ಯಕ್ಷ ಅಮರೇಶ ನಾಗೂರು, ವರ್ತಕ ಶಂಕರಗೌಡ ಪಾಟೀಲ್‍ ಮಾತನಾಡಿ, ‘ಸ್ವಾಮೀಜಿ ನೇತೃತ್ವದಲ್ಲಿ 712 ಕಿ.ಮೀ 39 ದಿನಗಳ ಪಾದಯಾತ್ರೆ, 23 ದಿನಗಳ ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಮೀಸಲಾತಿ ಹೋರಾಟದಲ್ಲಿ ಹುಳಿ ಹಿಂಡುವ ಕೆಲಸ ನಡೆದರೆ ಮುಖಂಡರಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಘಟಕ ಅಧ್ಯಕ್ಷ ಅಮರೇಶ ತಾವರಗೇರ ಅಧ್ಯಕ್ಷತೆ ವಹಿಸಿದ್ದರು. ಪಿಕಾರ್ಡ್‌ ಬ್ಯಾಂಕ್‍ ಅಧ್ಯಕ್ಷ ಮಹಾಂತೇಶ ಮುದಗಲ್‍, ಕಾಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಹೊಸಗೌಡ್ರ, ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ವಿಜಯಲಕ್ಷ್ಮಿ ದೇಸಾಯಿ, ಹಿರಿಯ ಮುಖಂಡ ಶಿವಕುಮಾರ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.