ADVERTISEMENT

ರಾಯಚೂರು: ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 11:26 IST
Last Updated 19 ಸೆಪ್ಟೆಂಬರ್ 2020, 11:26 IST
ಶಕ್ತಿನಗರ ಸಮೀಪದ ಮೀರಾಪುರ ಗ್ರಾಮದ ಬಳಿ ರಸ್ತೆ ಕೊಚ್ಚಿ ಹೋಗಿದೆ
ಶಕ್ತಿನಗರ ಸಮೀಪದ ಮೀರಾಪುರ ಗ್ರಾಮದ ಬಳಿ ರಸ್ತೆ ಕೊಚ್ಚಿ ಹೋಗಿದೆ   

ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ. ಸುತ್ತಿ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

‘ಜೇಗರಕಲ್, ಜೆ.ಮಲ್ಲಾಪುರ, ಡಿ.ರಾಂಪುರ, ಯರಗುಂಟ ಗ್ರಾಮಗಳಲ್ಲಿ ಕೆಲವು ಮನೆಗಳು ಜಲಾವೃತಗೊಂಡಿವೆ. ಭೀತಿಗೊಳಗಾದ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಭಾಗಶಃ ಮನೆಗಳು ಕುಸಿದಿವೆ. ಹಾನಿ ಕುರಿತು ಮಾಹಿತಿ ಕಲೆ ಹಾಕಲಾಗಿದೆ’ ಎಂದು ಕಂದಾಯ ನಿರೀಕ್ಷಕ ರಾಘವೇಂದ್ರ ತಿಳಿಸಿದರು.

ಮೀರಾಪುರ ಹಳ್ಳದ ನೀರಿನ ರಭಸದಿಂದಾಗಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಜೇಗರಕಲ್ ಮತ್ತು ಹೊಸಪೇಟೆ ಮಧ್ಯೆ ಇರುವ ಹಳ್ಳ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಗಂಜಳ್ಳಿ ಗ್ರಾಮದ ಹಳ್ಳ ಕೂಡ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಆಗಿದೆ. ಒಟ್ಟಾರೆ, ದೇವಸೂಗೂರು ಹೋಬಳಿ ವ್ಯಾಪ್ತಿಯ 20ಕ್ಕೂ ಹೆಚ್ಚು ಹಳ್ಳಿಗಳ ವಾಹನ ಸಂಚಾರ ಬಂದ್ ಆಗಿದ್ದು, ಸುತ್ತಿ ಬಳಸಿ ಪ್ರಯಾಣಿಸಬೇಕಾಗಿದೆ.

ADVERTISEMENT

ಹತ್ತಿ, ತೊಗರಿ, ಮೆಣಿಸಿಕಾಯಿ ಮತ್ತು ಭತ್ತ ಬೆಳೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜೇಗರಕಲ್‌ನಲ್ಲಿ 112.2 ಎಂ.ಎಂ, ಯರಮರಸ್‌–59.5 ಎಂ.ಎಂ., ದೇವಸೂಗೂರು–50 ಎಂ.ಎಂ. ಮತ್ತು ಕಲ್ಮಲಾದಲ್ಲಿ 84 ಎಂ.ಎಂ.ರಷ್ಟು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.