ADVERTISEMENT

ಮುಖ್ಯಮಂತ್ರಿ ಕುಂಭ, ಕಳಸ ಸ್ವಾಗತ

ಜಿಲ್ಲೆಯ ರೈತ ಸಮೂಹದಲ್ಲಿ ಚಿಗುರಿದ ಬೇಡಿಕೆ ಈಡೇರುವ ಆಸೆ

ಬಸವರಾಜ ಬೋಗಾವತಿ
Published 25 ಜೂನ್ 2019, 20:15 IST
Last Updated 25 ಜೂನ್ 2019, 20:15 IST

ಮಾನ್ವಿ:ಜೂನ್‌ 26ರಂದು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಾಗಿ ಮಾನ್ವಿ ತಾಲ್ಲೂಕಿನ ನಕ್ಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಗ್ರಾಮ ಕರೇಗುಡ್ಡ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಗ್ರಾಮದ ಮಹಾಂತೇಶ್ವರ ಮಠದಿಂದ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿರುವ ಕರೇಗುಡ್ಡ ಇದೀಗ ಮುಖ್ಯಮಂತ್ರಿಯ ವಾಸ್ತವ್ಯಕ್ಕೆ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದೆ. ಹಿರೇಕೊಟ್ನೇಕಲ್‌–ಹಣಗಿ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವ ಗ್ರಾಮದ ಪ್ರವೇಶ ದ್ವಾರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕುಂಭ, ಕಳಸ ಮೆರವಣಿಗೆ ಮೂಲಕ ಸ್ವಾಗತಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಜೂನ್‌ 26 ಬುಧವಾರ ಬೆಳಿಗ್ಗೆ 8ಗಂಟೆಗೆ ರಾಯಚೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಮೂಲಕ ಆಗಮಿಸುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಸ್ತೆಯುದ್ದಕ್ಕೂ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸನ್ಮಾನಿಸಿ ಸ್ವಾಗತಿಸಲಿದ್ದಾರೆ. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾಲ್ಲೂಕಿನ ಈರಲಗಡ್ಡಿ ಗ್ರಾಮವನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿದ್ದರು.

ADVERTISEMENT

ಕೊನೆ ಘಳಿಗೆಯಲ್ಲಿ ಈರಲಗಡ್ಡಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ರದ್ದಾಗಿತ್ತು. 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ತಾಲ್ಲೂಕಿನ ಕರೇಗುಡ್ಡ ಗ್ರಾಮವನ್ನು ತಮ್ಮ ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ತಾಲ್ಲೂಕಿನ ಜನರಲ್ಲಿ ಅಭಿಮಾನ, ಸಂತಸಕ್ಕೆ ಕಾರಣವಾಗಿದೆ. ತಾಲ್ಲೂಕಿಗೆ ಮುಖ್ಯಮಂತ್ರಿಯ ಆಗಮನ ಜೆಡಿಎಸ್‌ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದು, ಎಲ್ಲೆಡೆ ಸ್ವಾಗತ ಕೋರುವ ಫ್ಲೆಕ್ಸ್‌, ಬ್ಯಾನರ್‌ಗಳ ಅಬ್ಬರ ಕಾಣುತ್ತಿದೆ.

ಕರೇಗುಡ್ಡ ಗ್ರಾಮದ ಹೊರವಲಯದಲ್ಲಿ ಜನತಾ ದರ್ಶನ, ಕ್ಷೇತ್ರದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಹಿರಂಗ ಕಾರ್ಯಕ್ರಮಕ್ಕಾಗಿ ಸುಮಾರು 10ಸಾವಿರ ಆಸನಗಳ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಬುಧವಾರ ರಾತ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಂತ್ರಿ ವಾಸ್ತವ್ಯ ಹೂಡುವರು.

ನಿರೀಕ್ಷೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಪರವಾಗಿ ಪ್ರಚಾರಕ್ಕೆ ಬಂದಿದ್ದ ಎಚ್.ಡಿ.ಕುಮಾರಸ್ವಾಮಿ, ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಜೆಡಿಎಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು. ಅವರ ಕೋರಿಕೆಯಂತೆ ಜೆಡಿಎಸ್‌ ಪಕ್ಷದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿ ಆಯ್ಕೆಯಾಗುವ ಮೂಲಕ ಮುಖ್ಯಮಂತ್ರಿಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸುವ ಮುಖ್ಯಮಂತ್ರಿ ₹150ಕೋಟಿ ಅಂದಾಜು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಯ ಕಾಲುವೆ ನೀರು ಅವಲಂಬಿತ ರೈತರ ಅನುಕೂಲಕ್ಕಾಗಿ ಸಮಾನಾಂತರ ಜಲಾಶಯ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆರಂಭವಾಗಬೇಕು ಎಂಬುದು ತಾಲ್ಲೂಕಿನ ರೈತರ ಬಹುದಿನಗಳ ಬೇಡಿಕೆಯಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಗಾವತಿ ತಾಲ್ಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ತೀರ್ಮಾನಿಸಿದ್ದರೂ ಕಾಮಗಾರಿ ಚಾಲನೆ ಪಡೆದಿಲ್ಲ. ಈ ಕುರಿತು ಮುಖ್ಯಮಂತ್ರಿ ದೃಢ ನಿರ್ಧಾರ ಪ್ರಕಟಿಸುವ ನಿರೀಕ್ಷೆಯನ್ನು ತಾಲ್ಲೂಕಿನ ರೈತರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.