ADVERTISEMENT

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ದ್ವಿಗುಣ!

ಒಂದೇ ದಿನದಲ್ಲಿ 257 ಜನರಿಗೆ ಪಾಸಿಟಿವ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:34 IST
Last Updated 23 ಜುಲೈ 2020, 12:34 IST
ರಾಯಚೂರು ಗ್ರಾಮೀಣ ಶಾಸಕರ ಕಚೇರಿಯಲ್ಲಿ ಕೋವಿಡ್‌ ಸೋಂಕಿತರು ಪತ್ತೆ ಆಗಿದ್ದಕ್ಕೆ ನಿರ್ಬಂಧಿತ ವಲಯ ಎಂದು ಫಲಕ ಹಾಕಿ ಬಂದ್‌ ಮಾಡಲಾಗಿದೆ
ರಾಯಚೂರು ಗ್ರಾಮೀಣ ಶಾಸಕರ ಕಚೇರಿಯಲ್ಲಿ ಕೋವಿಡ್‌ ಸೋಂಕಿತರು ಪತ್ತೆ ಆಗಿದ್ದಕ್ಕೆ ನಿರ್ಬಂಧಿತ ವಲಯ ಎಂದು ಫಲಕ ಹಾಕಿ ಬಂದ್‌ ಮಾಡಲಾಗಿದೆ   

ರಾಯಚೂರು: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 257 ಜನರಿಗೆ ಕೋವಿಡ್ ದೃಢವಾಗಿದ್ದು, ಸಕ್ರಿಯ ಪ್ರಕರಣಗಳು ದಿಢೀರ್ ದ್ವಿಗುಣವಾದಂತಾಗಿದೆ. ಬುಧವಾರ 135 ಸೋಂಕಿತರು ಪತ್ತೆ ಆಗಿದ್ದರ ಬೆನ್ನಹಿಂದೆಯೇ ಮತ್ತೆ ಎರಡು ಪಟ್ಟು ಹೆಚ್ಚಳ ಆಗಿರುವುದು ಕಳವಳ ಹೆಚ್ಚಿಸಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯು ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಸೋಂಕಿತರನ್ನು ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ 'ಕೋವಿಡ್ ಕೇರ್ ಸೆಂಟರ್'ಗಳಲ್ಲಿ ದಾಖಲು ಮಾಡಿದ್ದಾರೆ. 50 ವರ್ಷ ಮೇಲ್ಪಟ್ಟಿರುವ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿತುವ ಸೋಂಕಿತರನ್ನು ಮಾತ್ರ ಜಿಲ್ಲಾ ಕೇಂದ್ರದಲ್ಲಿರುವ ಓಪೆಕ್ ಕರೆ ತರುವ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕಿತರ ಮೇಲೆ ಇನ್ನು ಮುಂದೆ ಆಯಾ ತಾಲ್ಲೂಕುಗಳಲ್ಲಿಯೇ ನಿಗಾ ಇಡಲಾಗುತ್ತಿದೆ. ಗಂಭೀರ ಸ್ಥಿತಿಗೆ ತಲುಪಿದವರನ್ನು ಮಾತ್ರವೇ ಓಪೆಕ್ ಗೆ ಕರೆತರಲಾಗುತ್ತದೆ.

ಇನ್ನೂ‌ ಹೆಚ್ಚಳ: ಜಿಲ್ಲೆಯಲ್ಲಿ ಬುಧವಾರದಿಂದ ಆ್ಯಂಟಿಜೆನ್ ಟೆಸ್ಟ್ ಆರಂಭಿಸಲಾಗಿದೆ.‌ ಇದಕ್ಕಾಗಿ 12 ವ್ಯಾನ್ ಗಳು ಹಾಟ್ ಸ್ಪಾಟ್ ಗಳಿಗೆ ತೆರಳಲಿವೆ.‌ ಆಶಾ, ಎಎನ್ ಎಂ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವರು. ಕೇವಲ ಅರ್ಧ ಗಂಟೆಯಲ್ಲಿ ವರದಿ ಕೈ ಸೇರಲಿವೆ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.

ADVERTISEMENT

ಕೆಮ್ಮು, ಜ್ವರ ಹಾಗೂ ಶೀತದಿಂದ ಬಳಲುವವರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಈಗಾಗಲೇ ಎರಡಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದ ಪ್ರದೇಶಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷಿಸುವ ಕೆಲಸ ಆರಂಭವಾಗಿದೆ. ಪ್ರತಿ ತಾಲ್ಲೂಕಿನಲ್ಲಿಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ರಾಯಚೂರಿನಲ್ಲಿಯೇ ಅತಿಹೆಚ್ಚು ಹಾಟ್‌ಸ್ಪಾಟ್‌ಗಳಿವೆ. ಕೊಳೆಗೇರಿ ಪ್ರದೇಶಗಳು ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿವೆ. ಅದರಲ್ಲೂ ಅಲ್ಪಸಂಖ್ಯಾತರಲ್ಲಿ ಸೋಂಕು ಪತ್ತೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.