ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು ತಾ.ಪಂ ಇಒ ಖಾಲೀದ್ ಅಹ್ಮದ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಪಂಚಾಯಿತಿ ಕಾಯ್ದೆಗಳನ್ನು ಉಲ್ಲಂಘಿಸಿ ನೋಡಲ್ ಅಧಿಕಾರಿ ಇಲ್ಲದೆ ಗ್ರಾಮ ಸಭೆ ಹಾಗೂ ಸಾಮಾಜಿಕ ಲೆಕ್ಕಪರಿಶೋಧನೆ ಸಭೆಯನ್ನು ನಡೆಸಲಾಗಿದೆ. ಪಿಡಿಒ ಶಿವಕುಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಈರಣ್ಣ ಸೇರಿದಂತೆ ಇನ್ನಿತರ ಕೆಲವರು ಸೇರಿಕೊಂಡು ಸಭೆ ನಡೆಸಿದ ದಾಖಲೆಗಾಗಿ ಕೆಲವೇ ಜನರ ಸಮ್ಮುಖದಲ್ಲಿ ಕಾಟಾಚಾರಕ್ಕೆ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದರು.
‘2024-25ನೇ ಸಾಲಿನಲ್ಲಿ ಪಂಚಾಯಿತಿಯ ಒಟ್ಟು ಅನುದಾನ ₹75 ಲಕ್ಷ, 15ನೇ ಹಣಕಾಸು ಯೋಜನೆ, ರಾಜ್ಯ ಹಣಕಾಸು ಮತ್ತು ನರೇಗಾ ಯೋಜನೆಗಳ ಲೆಕ್ಕಪರಿಶೋಧನೆ ಸಭೆಯಲ್ಲಿ ನೋಡಲ್ ಅಧಿಕಾರಿ ಇಲ್ಲದೆ ಜಿಲ್ಲಾ ಕಾರ್ಯಕ್ರಮಗಳ ವ್ಯವಸ್ಥಾಪಕ ಬಸವರಾಜ ನಾಗವಲ್ಲಿ ಭಾಗವಹಿಸಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ₹39 ಲಕ್ಷ ಹಾಗೂ ಅಂಗವಿಕಲರ ಹೆಸರಿನಲ್ಲಿ ₹1.30 ಲಕ್ಷ ಅನುದಾನ ದುರ್ಬಳಕೆಯಾಗಿದೆ’ ಎಂದು ದೂರಿದರು.
ಗ್ರಾ.ಪಂ ಅನುದಾನ ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.