ಮಾನ್ವಿ: ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಯ ವಿರೋಧಿಸಿ ಪೋತ್ನಾಳ ಗ್ರಾಮದಲ್ಲಿ ಗುರುವಾರ ನಾಗರಿಕರ ವೇದಿಕೆಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಮುಖ್ಯ ರಸ್ತೆ ಹತ್ತಿರ ಧರಣಿ ನಡೆಸಿದ ನಾಗರಿಕರ ವೇದಿಕೆಯ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಿಂಧನೂರು ಹಾಗೂ ಮಾನ್ವಿ ತಾಲ್ಲೂಕಿನ ಸುಮಾರು 40 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಪೋತ್ನಾಳ ಗ್ರಾಮ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿದೆ. ಇಲ್ಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಧರಣಿ ನಿರತರು ದೂರಿದರು.
ಪೋತ್ನಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು. ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಹಾಗೂ ತಡೆರಹಿತ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಪದವಿ ಕಾಲೇಜು, ತಾಯಿ ಮಕ್ಕಳ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಸಮುದಾಯ ಆರೋಗ್ಯ ಕೇಂದ್ರ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಮುನಿರಾಬಾದ್-ಮಹಿಬೂಬ್ ನಗರ ರೈಲು ಮಾರ್ಗ ಕಾಮಗಾರಿ ಚುರುಕುಗೊಳಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅವರು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಧರಣಿನಿರತರ ಜತೆಗೆ ಬೇಡಿಕೆಗಳ ಕುರಿತು ಚರ್ಚಿಸಿದರು. ಪೋತ್ನಾಳ ಗ್ರಾಮದಲ್ಲಿಯೇ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಬೇಡಿಕೆಗಳ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಪೋತ್ನಾಳ ನಾಗರಿಕರ ವೇದಿಕೆಯ ಸಂಚಾಲಕ ಶರಣಕುಮಾರ ಮುದ್ದಮಗುಡ್ಡಿ, ಪ್ರಧಾನ ಸಂಚಾಲಕ ಬಸವರಾಜ ಬಾಗಲವಾಡ, ಮುಖಂಡರಾದ ಪ್ರಭುರಾಜ ಕೊಡ್ಲಿ, ಪಿ.ರವಿಕುಮಾರ, ಅನಿಲ್ ನೀಲಕಂಠ, ಶಾಂತಕುಮಾರ ಮುದ್ದಮಗುಡ್ಡಿ, ಬಸವರಾಜ ಖರಾಬದಿನ್ನಿ, ಯೇಸಪ್ಪ ಪೋತ್ನಾಳ, ಅಶೋಕ ತಡಕಲ್, ಅಯ್ಯಪ್ಪ ಪೋತ್ನಾಳ, ರಫಿ ಗುರುಗುಂಟ, ರಂಜಿತ್ ಉದ್ಭಾಳ, ಬಸವರಾಜ ಉದ್ಭಳ, ಚಾದ್ ಪಾಷಾ ಮಸ್ಕಿ, ದೇವರಾಜ ರಾಮತ್ನಾಳ, ಹಂಪಯ್ಯ ಈರಲಗಡ್ಡಿ, ಚನ್ನಪ್ಪ ಉಟಕನೂರು, ಚಿನ್ನಮ್ಮ ಮುದ್ಮಮಗುಡ್ಡಿ, ಹಾಗೂ ಹಾಗೂ ಜಾಗೃತ ಮಹಿಳಾ ಸಂಘಟನೆಯ ಪದಾಧಿಕಾರಿಗಳು, ಮತ್ತು ಪ್ರಗತಿಪರ ಸಂಘಟನೆ ಸದಸ್ಯರು, ಹಾಗೂ ಪೋತ್ನಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.