ರಾಯಚೂರು: ನಗರದ ಡ್ಯಾಡಿ ಕಾಲೊನಿ, ಕಾಕತೀಯ ಕಾಲೊನಿ, ಡಾಲರ್ಸ್ ಕಾಲೊನಿ ಸೇರಿದಂತೆ ಪ್ರಮುಖ ಬಡಾವಣೆಗಳ ಜನ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7.30ರ ವರೆಗೂ ವಿದ್ಯುತ್ ಇಲ್ಲದ ಕಾರಣ ತೀವ್ರ ಸಮಸ್ಯೆ ಎದುರಿಸಿ ಕಂಗಾಲಾದರು.
ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಗ್ರಾಹಕರು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ದಿನವಿಡೀ ವಿದ್ಯುತ್ ಕಡಿತಗೊಳಿಸದಂತೆ ಸಂಘಟನೆಗಳು ಹಾಗೂ ಜನ ಲಿಖಿತವಾಗಿ ಮನವಿಪತ್ರ ಕೊಟ್ಟರೂ ಅಧಿಕಾರಿಗಳು ಗಂಭೀರವಾಗಿಲ್ಲ. ಜೆಸ್ಕಾಂ ಹಿರಿಯ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಕೊಟ್ಟರೂ ಕೆಳ ಹಂತದ ಅಧಿಕಾರಿಗಳು ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ.
ವಿದ್ಯುತ್ ಕಂಬ ಅಳವಡಿಸಲು ಜೆಸಿಬಿಯಿಂದ ತಗ್ಗು ತೋಡಿದಾಗ ಒಟ್ಟು ನಾಲ್ಕು ಕಡೆ ಪೈಪ್ ಒಡೆದು ನೀರು ಪೋಲಾಯಿತು. ನೇರವಾಗಿ ಒಂದೇ ಲೈನ್‌ನಲ್ಲಿ ಕುಡಿಯುವ ನೀರಿನ ಪೈಪ್ ಇರುವುದು ಗೊತ್ತಿದ್ದರೂ ಅಗೆದು ಪೈಪ್ ಒಡೆದರು. ಕುಡಿಯುವ ನೀರಿನ ಪೈಪ್ ಒಡೆದು ಮೊದಲೇ ನಾಲ್ಕು ದಿನಗಳಿಂದ ಬಡಾವಣೆಗೆ ನೀರು ಬಂದಿಲ್ಲ. ಜೆಸ್ಕಾಂ ಸಿಬ್ಬಂದಿಯ ಅಚಾತುರ್ಯದಿಂದಾಗಿ ವಿದ್ಯುತ್ ಹಾಗೂ ನೀರು ಇಲ್ಲದ ಸ್ಥಿತಿ ನಿರ್ಮಾಣವಾಯಿತು.
ಡ್ಯಾಡಿ ಕಾಲೊನಿಯಲ್ಲಿ 900 ಮೀಟರ್ ಉದ್ದದ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾರ್ಯ ಸತತ ಎರಡೂ ತಿಂಗಳಿಂದ ನಡೆದಿದೆ. ಜೆಸ್ಕಾಂ ಕಾರ್ಯ ವೈಖರಿಗೆ ಜನರು ಬೇಸತ್ತು ಹೋಗಿದ್ದಾರೆ. ಜನರಿಗೆ ರಜೆಯ ದಿನ ನೆಮ್ಮದಿಯಿಂದ ಸಮಯ ಕಳೆಯಲು ಸಹ ಸಾಧ್ಯವಾಗುತ್ತಿಲ್ಲ.
ನಾಳೆ ವಿದ್ಯುತ್ ಕಡಿತಗೊಳಿಸುವುದಿದ್ದರೆ ಒಂದು ದಿನ ಮುಂಚಿತವಾಗಿಯೇ ವಾರ್ತಾ ಇಲಾಖೆ ಹಾಗೂ ಪತ್ರಿಕೆಗಳಿಗೆ ಪ್ರಕಟಣೆ ನೀಡಬೇಕು. ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನೂ ಕೊಡುತ್ತಿಲ್ಲ.
‘ದಿನವಿಡೀ ವಿದ್ಯುತ್ ಕಡಿತಗೊಳಿಸಿದ ಕಾರಣ ರೆಫ್ರಿಜಿರೇಟರ್‌ನಲ್ಲಿ ಇಟ್ಟ ಮೊಸರು, ಹಾಲು ಕೆಟ್ಟು ಹೋಗಿದೆ. ಹೋಟೆಲ್‌ಗಳಲ್ಲಿನ ಪದಾರ್ಥಗಳು ಹಾಳಾಗಿವೆ. ಮೊಬೈಲ್‌ಗಳು ಆಫ್ ಆಗಿ ವ್ಯಾಪಾರ ವಹಿವಾಟು ಸಹ ನಡೆಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಕಡಿತದಿಂದ ಹೆಚ್ಚು ಹಾನಿ ಅನುಭವಿಸಬೇಕಾಗಿದೆ’ ಎಂದು ರೊಟ್ಟಿ ಕೇಂದ್ರದ ಬಸವರಾಜ ಬೇಸರ ವ್ಯಕ್ತಪಡಿಸಿದರು.
‘ಗ್ರಾಹಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಸಂಜೆ 7 ಗಂಟೆಯವರೆಗೂ ವಿದ್ಯುತ್ ಕಡಿತಗೊಳಿಸುವುದು ಸರಿಯಲ್ಲ. ಇನ್ನು ಹೀಗಾಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ಕೊಡಲಾಗಿದೆ’ ಎಂದು ಜೆಸ್ಕಾಂ ಎಇಇ ಚಂದ್ರಶೇಖರ್ ಹೇಳಿದರು.
ತಿಂಗಳಲ್ಲಿ ಎಂಟು ದಿನ ವಿದ್ಯುತ್ ಕಡಿತಗೊಳಿಸುತ್ತಿರುವ ಕಾರಣ ಜೆಸ್ಕಾಂ ಕಾರ್ಯ ವೈಖರಿಗೆ ಬಡಾವಣೆಯ ಜನರು ರೋಸಿ ಹೋಗಿದ್ದಾರೆ– ಕಮಲಮ್ಮ ಕಾಕತೀಯ, ಕಾಲೊನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.