ADVERTISEMENT

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಪ್ರಶಾಂತ ಕಣ್ಣೂರಕರ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 20:25 IST
Last Updated 28 ಜನವರಿ 2026, 20:25 IST
   

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026 ನಿಮಿತ್ತ ಜನವರಿ 28ರಂದು ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪುರುಷರ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ದೇಹದಾರ್ಢ್ಯ ಪಟು ಪ್ರಶಾಂತ ಕಣ್ಣೂರಕರ್ ಅವರು ಮಿಸ್ಟರ್ ರಾಯಚೂರು ಉತ್ಸವ-2026ರ ಕಿರೀಟವನ್ನು ಮುಡಿಗೇರಿಸಿಕೊಂಡರು.

ಬೆಳಗಾವಿಯ ಮತ್ತೊಬ್ಬ ದೇಹದಾರ್ಢ್ಯ ಪಟು ಪ್ರತಾಪ ವಿಠ್ಠಲ್ ಕಾಲಕುಂದ್ರಿಕರ್ ಅವರು ರನರ್ ಆಫ್ ಆಗಿ ಹೊರಹೊಮ್ಮಿದರು. ರಾಯಚೂರಿನ ವೃಷಭ್ ವಶಿಷ್ಠ ಅವರು ಬೆಸ್ಟ್ ಪೋಜರ್ ಬಹುಮಾನ ಗೆದ್ದುಕೊಂಡರು. ವಿಜೇತರಿಗೆ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಮಹಾನಗರ ಪಾಲಿಕೆ ಕಮಿಷನರ್ ಜುಬಿನ್ ಮೊಹಾಪಾತ್ರ, ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘದ

ಅಧ್ಯಕ್ಷ ಮಂಜುನಾಥ ಹಾನಗಲ್, ಸಂಘದ ಫೌಂಡರ್ ಹಾಗೂ ಕಾರ್ಯದರ್ಶಿ ಸುಧಾಕರ ಕುರುಡಿ ಅವರು ವಿಜೇತರಿಗೆ ಟ್ರೊಫಿ, ಮೆಡಲ್, ಪ್ರಮಾಣ ಪತ್ರ ಮತ್ತು ಕ್ರಮವಾಗಿ ಪ್ರಥಮ ಬಹುಮಾನ ₹30 ಸಾವಿರ ರೂ, ದ್ವಿತೀಯ ಬಹುಮಾನ ₹10 ಸಾವಿರ ಬಹುಮಾನ ನೀಡಿ ಸನ್ಮಾನಿಸಿದರು.

ADVERTISEMENT

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಈ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.

ಗಂಗಾಧರ ಎಂ., ಶಂಕರ ಪಿಲ್ಲೆ, ಮೆಹಬೂಬ್, ಸುಧಾಕರ, ಸುನೀಲ್ ರಾವುತ್, ಕಿರಣಕುಮಾರ, ಸಬರುದ್ದೀನ್ ಪಾಶಾ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

55 ಕೆ.ಜಿ., 60 ಕೆ.ಜಿ.,65 ಕೆ.ಜಿ.,70 ಕೆ.ಜಿ., 75 ಕೆ.ಜಿ.,80 ಕೆ.ಜಿ. ಮತ್ತು 80+ ಕೆ.ಜಿ ಸೇರಿದಂತೆ ಒಟ್ಟು ಏಳು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ವಿಭಾಗದಲ್ಲಿ ವಿಜೇತರಾದ ತಲಾ ಐದು ಸ್ಪರ್ಧಾಳುಗಳಿಗೆ ಕ್ರಮವಾಗಿ 15,000, 5000, 4000, 3000 ಮತ್ತು 2000 ರೂ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಮೆಡಲ್ ನೀಡಿ ಸತ್ಕರಿಸಲಾಯಿತು.

ಪೂರ್ಣಪಂದ್ಯ ವೀಕ್ಷಿಸಿದ ಜಿಲ್ಲಾಧಿಕಾರಿ, ಜಿಪಂ ಸಿಇಒ: ದೇಹದಾರ್ಢ್ಯ ಸ್ಪರ್ಧೆಯು ಜನವರಿ 28ರ ರಾತ್ರಿ 7.30ಕ್ಕೆ ಆರಂಭವಾಯಿತು. ಜಿಪಂ ಸಿಇಒ ಮಹಾನಗರ ಪಾಲಿಕೆಯ ಆಯುಕ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಇನ್ನೀತರ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರು, ಪಂದ್ಯ ವೀಕ್ಷಕರ ಸಾಲಿನಲ್ಲಿ ಕುಳಿತು ಪಂದ್ಯ ಆರಂಭದಿಂದ ರಾತ್ರಿ 10.30ರವರೆಗೆ ಸತತ 3 ಗಂಟೆ ಸಮಯ ದೇಹದಾರ್ಢ್ಯ ಸ್ಪರ್ಧೆಯ ವೀಕ್ಷಣೆ ನಡೆಸಿ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು.

ರಾಯಚೂರು ಉತ್ಸವದ ಬಗ್ಗೆ ಸಲಹೆ ಕೇಳಲು ಜಿಲ್ಲಾಡಳಿತದಿಂದ ನಡೆಸಿದ ಸಂಘ ಸಂಸ್ಥೆಗಳ, ಗಣ್ಯರ, ನಾಗರಿಕರ, ಬುದ್ದಿ ಜೀವಿಗಳ, ಸಾಹಿತಿಗಳ, ಕಲಾವಿದರ ಮೊದಲ ಸಭೆಯಲ್ಲಿ ಕೇಳಿ ಬಂದ ಸಲಹೆಯಂತೆ ನಾವು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜ‌ನೆ ಮಾಡಿ ಕ್ರೀಡಾಸಕ್ತರಿಗೆ ಸ್ಪೂರ್ತಿ ನೀಡಿದ್ದೇವೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅಭಿಪ್ರಾಯ ಹಂಚಿಕೊಂಡರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಡಿವೈಎಸ್ಪಿ ಶಾಂತವೀರ, ರಾಯಚೂರು ಉಪ ವಿಭಾಗಾಧಿಕಾರಿ ಡಾ.ಹಂಪಣ್ಣ ಸಜ್ಜನ, ತಹಸೀಲ್ದಾರ ಸುರೇಶ ವರ್ಮಾ, ಅಮರೇಶ ಬಿರಾದಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಿ, ಡಿಎಚ್ ಒ ಡಾ.ಸುರೇಂದ್ರ ಬಾಬು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಉಪಸ್ಥಿತರಿದ್ದರು.

ದಂಡಪ್ಪ ಬಿರಾದಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.